ಬಿಹಾರದಲ್ಲಿ ನಕ್ಸಲರ ಅಟ್ಟಹಾಸ, ನಾಲ್ವರನ್ನು ನೇಣಿಗೇರಿಸಿ ಹತ್ಯೆ

ಗಯಾ, ನ.14- ಬಿಹಾರದಲ್ಲಿ ನಕ್ಸಲೀಯರು ಅಟ್ಟಹಾಸ ಮೆರೆದಿದ್ದು, ನಾಲ್ವರು ಗ್ರಾಮಸ್ಥರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದಾರೆ. ಅವರು ವಾಸಿಸುತ್ತಿದ್ದ ಮನೆಗಳನ್ನು ಸ್ಪೋಟಿಸಿರುವ ಮನಕಲಕುವ ಘಟನೆ ಸಂಭವಿಸಿದೆ.
ಗಯಾ ಜಿಲ್ಲೆಯ ದುಮಾರಿಯಾ ಬ್ಲಾಕ್ ನ ಮೌನ್ ಬಾರ್ ಗ್ರಾಮದಲ್ಲಿ ಮಾವೋವಾದಿ ನಕ್ಸಲೀಯರು ತಡ ರಾತ್ರಿ ಈ ಕೃತ್ಯ ಎಸಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಗ್ರಾಮಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದರು. ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಮೌನ್ ಬಾರ್ ಗ್ರಾಮದ ನಿವಾಸಿಯಾಗಿರುವ ಸರ್ಜುಸಿಂಗ್ ಅವರ ಮನೆಯನ್ನು ಬಾಂಬ್ ನಿಂದ ಸ್ಪೋಟಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪತಿ-ಪತ್ನಿ ಸೇರಿದಂತೆ ನಾಲ್ವರನ್ನು ನೇಣಿಗೇರಿಸಿದ್ದಾರೆ.
ಮೃತರನ್ನು ಸರ್ಜುಸಿಂಗ್ ,ಸತ್ಯೇಂದ್ರ ಸಿಂಗ್, ಮಹೇಂದ್ರ ಸಿಂಗ್ ಹಾಗೂ ಮನೋರಮಾ ದೇವಿ ಎಂದು ಗುರುತಿಸಲಾಗಿದೆ.
ಈ ಭೀಕರ ಹತ್ಯಾಕಾಂಡದ ಬಳಿಕ ಗ್ರಾಮದಲ್ಲಿ ನಕ್ಸಲೀಯರು ಪೋಸ್ಟರ್ ಅಂಟಿಸಿ, ಈ ಕುಟುಂಬದ ಸದಸ್ಯರು ನಾಲ್ವರು‌ ನಕ್ಸಲರ ಹತ್ಯೆಗೆ ಕಾರಣರಾಗಿದ್ದರು.‌ ಅದಕ್ಕೆ ಈಗ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಪೋಸ್ಟರ್ ನಲ್ಲಿ ಬರೆದುಕೊಂಡಿದ್ದಾರೆ.