ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಮೋದಿ ವಿಶ್ವಾಸ

ಪಾಟ್ನಾ . ನ. ೧- ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಅತ್ಯಧಿಕ ಮತದಾನ ಆಗಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪಾಗಲಿದೆ. ಮೊದಲ ಹಂತದ ಮತದಾನದಲ್ಲಿ ಮತದಾರನ ಒಲವನ್ನು ಗಮನಿಸಿದರೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದಾರೆ.

ಬಿಹಾರದ ಚಾಪ್ರ ಎಂಬಲ್ಲಿ ಏರ್ಪಡಿಸಿದ್ದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಮೊದಲ ಹಂತದ ಮತದಾನದ ನಂತರ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಹೇಳಿದರು.

ಎನ್ ಡಿಎ ಪರ ಮತದಾರರ ಒಲವು ತೋರಿಸುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಇಂತಹ ಮಂದಿ ರಾತ್ರಿಯೆಲ್ಲ ನಿದ್ದೆಗೆಟ್ಟು ಚಿಂತನೆ ಮಾಡುತ್ತಿರುತ್ತಾರೆ. ಬಿಹಾರದಲ್ಲಿ ಮತ್ತೆ ಇಂಡಿಯ ಅಧಿಕಾರಕ್ಕೆ ಬರುವ ಮುನ್ಸೂಚನೆ ತಿಳಿದು ಕೆಲವು ನಾಯಕರು ಹತಾಶರಾಗಿದ್ದಾರೆ. ಅದಕ್ಕಾಗಿ ಅವರು ಮೋದಿಯನ್ನು ಟೀಕಿಸುತ್ತಾರೆ ಎಂದು ಅವರು ತಿಳಿಸಿದರು .

ಕೆಲವರು ಉದ್ದೇಶಪೂರ್ವಕವಾಗಿಯೇ ಬಿಹಾರದ ಜನರಲ್ಲಿ ಗೊಂದಲ ಸೃಷ್ಟಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಒಂದೆಡೆ ಡಬಲ್ ಎಂಜಿನ್‌ಗಳಿರುವ ಸರ್ಕಾರವನ್ನು ನೀವು ಹೊಂದಿದ್ದೀರಿ. ಇನ್ನೊಂದೆಡೆ ಇಬ್ಬರು ರಾಜರಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಬಿಹಾರದ ಅಭಿವೃದ್ಧಿಗಾಗಿ ಬದ್ಧತೆಯಿಂದ ಶ್ರಮಿಸುತ್ತಿದೆ. ಆದರೆ ಆ ಇಬ್ಬರು ರಾಜರು ತಮ್ಮ ಸಿಂಹಾಸನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಮೋದಿ ಟೀಕಿಸಿದರು.

ಉತ್ತರಪ್ರದೇಶದಲ್ಲಿ ಇಬ್ಬರು ರಾಜಕುಮಾರರು ಸೋಲನುಭವಿಸಿದ್ದರು ಅದೇ ಪರಿಸ್ಥಿತಿ ಈಗಲೂ ಅವರಿಗೆ ಎದುರಾಗಲಿದೆ ಎಂದು ಮೋದಿ ಹೇಳಿದರು.

ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ತಮ್ಮ ಸರ್ಕಾರ ಸದಾಕಾಲ ಬಡವರ ಪರವಾಗಿ ನಿಲ್ಲುತ್ತದೆ ಎಂದರು.

ವಿಶ್ವದ ಅತಿ ದೊಡ್ಡ ದೇಶಗಳಲ್ಲಿ ಕೋವಿಡ್ ೧೯ ರ ಎರಡನೇ ಅಲೆ ಪ್ರಾರಂಭವಾಗಿರುವುದು ಕಂಡುಬರುತ್ತಿದೆ. ಆದರೆ ತಮ್ಮ ನೇತೃತ್ವದ ಸರ್ಕಾರ ಅತ್ಯಂತ ಬಿಕ್ಕಟ್ಟಿನ ಕಾಲದಲ್ಲಿ ಬಡವರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಅಮೆರಿಕದಲ್ಲಿನ ಜನಸಂಖ್ಯೆಗಿಂತ ಭಾರತದಲ್ಲಿ ಬಡವರು ಹೆಚ್ಚಾಗಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಸರ್ಕಾರ ಬಡವರಿಗೆ ಉಚಿತವಾಗಿ ಆಹಾರ ಪದಾರ್ಥ ತೋರಿಸಿದೆ ಎಂದರು.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮೋದಿ ಅವರು ತಮ್ಮ ಕುಟುಂಬಗಳ ಬಗ್ಗೆ ಮಾತ್ರವೇ ಯೋಚನೆ ಮಾಡುವ ಜನರು ಬಡವರ ಬಗ್ಗೆ ಚಿಂತನೆ ಮಾಡುವುದಿಲ್ಲ ಎಂದರು.

ಬಿಹಾರದ ತಾಯಂದಿರಿಗೆ ಒಂದು ಮಾತು ಹೇಳಲು ನಾನು ಇಚ್ಛಿಸುತ್ತೇನೆ. ದೆಹಲಿಯಲ್ಲಿರುವ ನಿಮ್ಮ ಮಗ ಚಾತ್ ಪೂಜೆಯನ್ನು ಅದ್ದೂರಿಯಾಗಿ ನಡೆಸಲು ಅನುವು ಮಾಡಿಕೊಡುತ್ತಾನೆ. ಯಾರೊಬ್ಬರೂ ಹಸಿವಿನಿಂದ ರಾತ್ರಿ ವೇಳೆ ಮಲಗಬಾರದು ಅದಕ್ಕಾಗಿಯೇ ಚಾತ್ ಪೂಜೆ ವರೆಗೂ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ಪೂರೈಸುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದರು.

ನಂತರ ಸಮಷ್ಟಿ ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎನ್ಡಿಎ ಸರ್ಕಾರದ ಮಂತ್ರವಾದ ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್ ಎಂಬ ಉದ್ದೇಶದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಆಗಿ ತಿಳಿಸಿದರು