ಬಿಸಿ ಊಟ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ

(ಸಂಜೆವಾಣಿ ವಾರ್ತೆ)
ಶಹಾಪುರ:ಜೂ.11:ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ, ತಾಲ್ಲೂಕ ಸಮಿತಿ, ಶಹಾಪುರ ವತಿಯಿಂದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ರವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ಸಂಘದ ಗೌರವಾಧ್ಯಕ್ಷೆ ಸುನಂದಾ ಹಿರೇಮಠ ಮಾತನಾಡಿ ರಾಜ್ಯದಲ್ಲಿ ಮಧ್ಯಾನದ ಬಿಸಿಯೂಟ ಯೋಜನೆಯಡಿಯಲ್ಲಿ ಒಂದು ಲಕ್ಷ ಹದಿನಂಟು ಸಾವಿರ ಮಹಿಳಾ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅತೀ ಹೆಚ್ಚಿನ ಮಹಿಳೆಯರು ವಿಧವೆ, ವಿಚ್ಛೇದಿತರು, ಬಡ ಮಹಿಳೆಯರು ಇರುತ್ತಾರೆ. ಇವರೆಲ್ಲರ ಕುಟುಂಬ ಇವರ ದುಡಿಮೆಯನ್ನೇ ನಂಬಿರುತ್ತಾರೆ.
ಆದರೆ ರಾಜ್ಯದಲ್ಲಿ ಕೋವಿಡ್-19 ಹರಡುವಿಕೆಯನ್ನು ತಡೆಯಲು ಸಂಪೂರ್ಣ ಲಾಕ್ ಡೌನ್ ಮಾಡಿದ್ದರ ಭಾಗವಾಗಿ ರಾಜ್ಯದ ಎಲ್ಲಾ ಶಾಲೆಗಳನ್ನು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಳೆದ 14 ತಿಂಗಳುಗಳಿಂದ ಮುಚ್ಚಲಾಗಿದೆ. ಆದಾಗ್ಯೂ ಈ ಮಹಿಳಾ ಕಾರ್ಮಿಕರು ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳ ಕುಟುಂಬದ ಮನೆಗಳಿಗೆ ತಲುಪಿಸುವ ಕೆಲಸ ಮಾಡಿರುತ್ತಾರೆ. ಆದರೆ ಈ ಮಹಿಳಾ ಕಾರ್ಮಿಕರಿಗೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡದೇ ಇದ್ದರೂ ಕೂಡಾ ಇವರು ತಮ್ಮ ಕೆಲಸವನ್ನು ನಿರ್ವಹಿಸಿರುತ್ತಾರೆ. ಆದರೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲ್ಲೂಕಾಧ್ಯಕ್ಷೆ ಹಣಮಂತಿ ಮೌರ್ಯ ಅವರು ಕೋವಿಡ್-19 ಎರಡನೇ ಅಲೆಯ ಲಾಕ್ ಡೌನ್ ಘೋಷಣೆಯಿಂದಾಗಿ ಸದರಿ ಮಹಿಳಾ ಕಾರ್ಮಿಕರು ಬೇರೆ ಯಾವುದೇ ಸವಲತ್ತುಗಳಿಲ್ಲದೇ ಇರುವುದರಿಂದ ಇವರು ಜೀವನ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದಾರೆ ಮತ್ತು ಅವರ ಕುಟುಂಬ ಅಕ್ಷರಸಹ ಸಂಕಷ್ಟಕ್ಕಿಡಾಗಿದೆ. ಅಲ್ಲದೇ ಕಳೆದ ಬಾರಿ ಯಾವುದೇ ಪರಿಹಾರ ನೀಡಿಲ್ಲ ಅಲ್ಲದೇ ಈ ಬಾರಿಯೂ ಕೂಡಾ ಯಾವುದೇ ಪರಿಹಾರ ನೀಡಿರುವುದಿಲ್ಲ ಸರ್ಕಾರದ ಈ ಮಹಿಳಾ ವಿರೋಧಿ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು.
ಸಿ.ಐ.ಟಿ.ಯು ತಾಲ್ಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ ಸಂಕಷ್ಟದಲ್ಲಿರುವ ಈ ಕುಟುಂಬಗಳಿಗೆ ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ತಿಂಗಳಿಗೆ ?6000 ಪರಿಹಾರವನ್ನು ನೀಡಿ ಕುಟುಂಬ ನಿರ್ವಹಣೆಗಾಗಿ ಅಗತ್ಯ ಇರುವ ಆಹಾರ ಸಾಮಗ್ರಿಗಳನ್ನು ಕೂಡಲೇ ನೀಡುವ ಮೂಲಕ ಸಹಾಯ ಮಾಡಲು ಒತ್ತಾಯಿಸಬೇಕೆಂದು ಈ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಮಂಜುಳಾ ಹೊಸಮನಿ, ಸಿ.ಐ.ಟಿ.ಯು ಜಿಲ್ಲಾ ಮುಖಂಡರಾದ ಬಸಲಿಂಗಮ್ಮ ನಾಟೇಕಾರ ಇದ್ದರು.