ಬಿಸಿಲ ನಾಡಿಗೆ ನಾಳೆ ನಮೋ

ಬಿಗಿ ಭದ್ರತೆ
ಬೆಂಗಳೂರು,ಜ.೧೮: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ನಿಧಾನವಾಗಿ ಏರುತ್ತಿದ್ದು, ಪ್ರಧಾನಿ ಮೋದಿ ಅವರು ಕಳೆದ ಒಂದು ವಾರದಲ್ಲೇ ೨ನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಪ್ರಚಾರದ ಭರಾಟೆ ಮತ್ತಷ್ಟು ಬಿರುಸು ಪಡೆಯಲಿದೆ,ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಯಾತ್ರೆಗಳನ್ನು ನಡಸಿರುವಾಗಲೇ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ವರಿಷ್ಠ ನಾಯಕರುಗಳು ರಾಜ್ಯ ಭೇಟಿಯೂ ಹೆಚ್ಚಾಗಿದ್ದು, ನಾಳೆ ಪ್ರಧಾನಿ ಮೋದಿ ಅವರು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಬಿಜೆಪಿಯ ಪ್ರಚಾರಕ್ಕೆ ಮತ್ತಷ್ಟು ಬಲ ತುಂಬುವರು.
ಕಳೆದ ವಾರ ಹುಬ್ಬಳ್ಳಿಯಲ್ಲಿ ಯುವಜನೋತ್ಸವಕ್ಕೆ ಚಾಲನೆ ನೀಡುವ ಮುನ್ನ ಅದ್ಧೂರಿ ರೋಡ್ ಶೋ ನಡೆಸಿ ಬಿಜೆಪಿಯ ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸಿದ್ದ ಪ್ರಧಾನಿ ಮೋದಿ ಅವರು ನಾಳೆ ರಾಜ್ಯಕ್ಕೆ ಒಂದು ವಾರದಲ್ಲೇ ೨ನೇ ಬಾರಿಗೆ ಭೇಟಿ ನೀಡುತ್ತಿರುವುದು ಕಾರ್ಯಕರ್ತರಲ್ಲಿ ಅಮಿತೋತ್ಸಾಹ ಮೂಡಿಸಿದೆ.ಪ್ರಧಾನಿ ಮೋದಿ ಅವರು ನಾಳೆ ಬೆಳಿಗ್ಗೆ ೧೧ ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೈಕಲ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸುವ ಪ್ರಧಾನಿಗಳು, ನಾರಾಯಣಪುರ ಎಡದಂಡೆ ಕಾಲುವೆ ಜಾಲದ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಮಾಡುವರು.ಹಾಗೆಯೇ ಜನಜೀವನ್ ಮಿಷನ್ ನಡಿ ಯಾದಗಿರಿಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸೂರತ್=ಚೆನ್ನೈ ಎಕ್ಸ್‌ಪ್ರಸ್ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗುವರು. ಈ ಕಾರ್ಯಕ್ರಮದ ನಂತರ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮೂಳಕೇಡದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿರುವ ತಾಂಡ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಸರ್ಕಾರಿ ಕಾರ್ಯಕ್ರಮಗಳ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಭಾಗಿಯಾಗುವರು.ಪ್ರಧಾನಿ ಮೋದಿ ಅವರ ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಎಲ್ಲ ಸಚಿವರುಗಳು, ಶಾಸಕರುಗಳು, ಸಂಸದರುಗಳು ಭಾಗಿಯಾಗುವರು.ಬಿಗಿ ಬಂದೋಬಸ್ತ್ಪ್ರ ಧಾನಿ ಆಗಮನದ ಹಿನ್ನೆಲೆಯಲ್ಲಿ ಕಲಬುರಗಿ ಮತ್ತು ಯಾದಗಿರ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ದೆಹಲಿಯಲ್ಲಿ ನಿನ್ನೆ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯವಿಧಾನಸಭಾ ಚುನಾವಣೆಯ ಬಗ್ಗೆ ರಣತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆದ ಬೆನ್ನಲ್ಲೆ ಈ ತಿಂಗಳ ೨೦ ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ನಡೆಯಲಿದ್ದು, ಈ ಕಾರ್ಯಕಾರಿಣಿಯಲ್ಲಿ ಕೇಂದ್ರ ಕಾರ್ಯಕಾರಿಣಿಯ ಸಲಹೆ-ಸೂಚನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.ಈ ತಿಂಗಳ ೨೦ ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ನಿಗದಿಯಾಗಿದ್ದು, ಈ ಸಭೆಯಲ್ಲಿ ವರಿಷ್ಠರ ಸೂಚನೆಯಂತೆ ರಾಜ್ಯದಲ್ಲಿ ಚುನಾವಣೆಯ ಪ್ರಚಾರಾಂದೋಲನ, ಸಾರ್ವಜನಿಕ ಸಭೆ, ರ್‍ಯಾಲಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಕೇಂದ್ರ ನಾಯಕರನ್ನು ಯಾವ ಯಾವ ಜಿಲ್ಲೆಗಳಿಗೆ ಕರೆಸಬೇಕು, ಎಲ್ಲೆಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಬೇಕು ಎಂಬ ವಿಚಾರಗಳು ಅಂತಿಮವಾಗಲಿದೆ. ಹಾಗೆಯೇ ಜ.೨೧ ರಿಂದ ಬಿಜೆಪಿ ನಡೆಸಲಿರುವ ವಿಜಯಸಂಕಲ್ಪ ಅಭಿಯಾನದ ಬಗ್ಗೆಯೂ ಚರ್ಚೆಗಳೂ ನಡೆಯಲಿವೆ.