ಬಿಸಿಲಿನ ಬೇಗೆಗೆ ತತ್ತರಗೊಂಡ ನಾಗರೀಕರ ದಾಹ ತೀರಿಸುತ್ತಿರುವ ಕೋಲಾರದ ಪುದೀನಾ

ಕೋಲಾರ,ಏ,೩-ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ದಾಹದಿಂದ ತತ್ತರಿಸುವ ನಾಗರೀಕರಿಗೆ ನಗರದ ಪ್ರಭಾತ್ ಚಿತ್ರಮಂದಿರದ ಪಕ್ಕ ತಲೆಯೆತ್ತಿರುವ ಲೋಕೇಶ್ ಕಬ್ಬಿನ ಹಾಲಿನ ಅಂಗಡಿಯಲ್ಲಿ ವಿಶಿಷ್ಟ ಸ್ವಾದದ ಕಬ್ಬಿನ ಹಾಲು ಕೈಬೀಸಿ ಕರೆಯುವ ಮೂಲಕ ದಾಹ ತಣಿಸುತ್ತಿದೆ.
ಈ ಬಾರಿ ಕುಡಿಯುವ ನೀರಿಗೆ ಅಷ್ಟಾಗಿ ಸಂಕಷ್ಟ ಎದುರಾಗದಿದ್ದರೂ ಬಿಸಿಲಿನ ಬೇಗೆ ಮಾತ್ರ ಹೆಚ್ಚುತ್ತಿದೆ, ಸುಡು ಬಿಸಿಲಿನಲ್ಲಿ ಬೀದಿಗೆ ಬರಲು ಹೆದರುವ ವಾತಾವರಣ ಕೋಲಾರದಲ್ಲಿ ನಿರ್ಮಾಣವಾಗಿದ್ದು, ದಾಹ ತೀರಿಸಿಕೊಳ್ಳಲು ಜನತೆ ರಸ್ತೆ ಬದಿಯಲ್ಲಿನ ಕಬ್ಬಿನ ಹಾಲು, ಕಲ್ಲಂಗಡಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.
ಕೋಲಾರ ನಗರದಲ್ಲಿ ದೊಡ್ಡಪೇಟೆಯ ಮುಖ್ಯರಸ್ತೆ ಎಂದಾಕ್ಷಣ ಜನಸಂಚಾರ ಇಲ್ಲಿ ಹೆಚ್ಚು ಈ ಭಾಗದ ಪ್ರಭಾತ್ ಚಿತ್ರಮಂದಿರಕ್ಕೆ ಹೊಂದಿಕೊಂಡಂತೆ ಜ್ಯೂಸ್ ಹೆಸರಿನಿಂದಲೇ ಖ್ಯಾತರಾದ ನಾರಾಯಣಸ್ವಾಮಿ ಅವರು ಕಬ್ಬಿನಹಾಲಿನ ಅಂಗಡಿ ಬಿಸಿಲಿನ ಬೇಗೆಗೆ ತತ್ತರಿಸಿರುವ ಜನರನ್ನು ಕೈಬೀಸಿ ಕರೆಯುತ್ತದೆ.
ತಮ್ಮ ಹತ್ತಾರು ವರ್ಷಗಳ ಅನುಭವದಿಂದ ಚಿರಪರಿಚಿತರಾದ ನಾರಾಯಣಸ್ವಾಮಿ ವಿಶಿಷ್ಟ ರೀತಿಯ ಕಬ್ಬಿನ ಹಾಲು ತಯಾರಿಸಿಕೊಡುವಲ್ಲಿ ನಿಸ್ಸೀಮರು. ಆಹ್ಲಾದಕರ ಕಬ್ಬಿನ ಹಾಲು ಪುದೀನಾ, ನಿಂಬೆ, ಶುಂಠಿ, ಅನಾನಸ್ ಮತ್ತಿತರ ಸ್ವಾದಗಳಲ್ಲಿ ಸಿಗುವುದರಿಂದ ಜನತೆ ಇಲ್ಲಿ ಕಬ್ಬಿನ ಹಾಲು ಕುಡಿಯಲು ಮುಗಿ ಬೀಳುತ್ತಾರೆ.
ಜ್ಯೂಸ್ ನಾರಾಯಣಸ್ವಾಮಿ ಹೇಳುವಂತೆ ಅವರು ಹಾಸನ ಜಿಲ್ಲೆಯ ಹೊಳೆ ನರಸೀಪುರದಿಂದ ಕಬ್ಬನ್ನು ನಿರಂತರವಾಗಿ ಖರೀದಿಸಿ ತರುತ್ತಿದ್ದು, ಈ ಕಬ್ಬಿನಲ್ಲಿ ಸಿಹಿಯ ಪ್ರಮಾಣ ಹೆಚ್ಚು ಎಂದು ಹೇಳುತ್ತಾರೆ, ಕಬ್ಬಿನ ಹಾಲು ತಯಾರಿಕೆ ಜಾಗದಲ್ಲಿ ಶುದ್ದತೆಯನ್ನೂ ಕಾಪಾಡಿರುವ ಅವರು, ಕಬ್ಬಿನ ಹಾಲು ಕುಡಿಯಲು ಬರುವವರ ಎದುರಲ್ಲೇ ಕಬ್ಬಿನ ಜಳ್ಳೆಯನ್ನು ಹಿಂಡಿ ರಸ ತೆಗೆದು ಕುಡಿಯಲು ನೀಡುವ ಮೂಲಕ ಈ ಭಾಗದಲ್ಲಿ ಮನೆ ಮಾತಾಗಿದ್ದಾರೆ.
ಬಿಸಿಲಿನ ತಾಪಕ್ಕೆ ಎಷ್ಟು ನೀರು ಕುಡಿದರೂ ದಾಹ ಇಂಗದಿರುವಾಗ ಇಲ್ಲಿನ ಕಬ್ಬಿನ ಹಾಲು ದಾರಿಯಲ್ಲಿ ಸಂಚರಿಸುವವರಿಗೆ ತಂಪು ನೀಡುತ್ತಿದ್ದು, ಅತಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.
ರಸ್ತೆ ಬದಿ ಅಂಗಡಿಯಿದ್ದರೂ ಕಬ್ಬನ್ನು ಶುದ್ದ ಬಟ್ಟೆಯಿಂದ ಸಂರಕ್ಷಿಸಿ ದೂಳು ಬೀಳದಂತೆ ಎಚ್ಚರವಹಿಸಲಾಗಿದ್ದು, ಪ್ರತಿ ಬಾರಿಯೂ ಕಬ್ಬನ್ನು ಗಾಣಕ್ಕೆ ನೀಡುವಾಗ ಶುದ್ದ ನೀರಿನಿಂದ ತೊಳೆದು ನೀಡಿ ರಸ ಪಡೆಯುವ ಅಂಗಡಿಯ ಲೋಕೇಶ್,ಮಂಜುನಾಥ್ ಇವರ ಕಾರ್ಯ ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.
ಒಟ್ಟಾರೆ ಬಿಸಿಲಿನ ಬೇಗೆಗೆ ತತ್ತರಿಸಿರುವ ನಾಗರೀಕರ ಪಾಲಿಗೆ ಈ ವಿಶಿಷ್ಟ ಸ್ವಾದದ ಕಬ್ಬಿನ ಹಾಲು ದಾಹ ತಣಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ ಎನ್ನಬಹುದು.