ಬಿಸಿಲಿನ ಬೆಗೆಗೆ ಬಸವಳಿದ ಗಿರಿನಾಡ ಜನತೆ ವಾರದಿಂದ ಏರಿಕೆಯಾಗುತ್ತಿರುವ ತಾಪಮಾನ

ಕೆಂಭಾವಿ : ಮೇ.21:ರಾಜ್ಯದಲ್ಲಿ ಬಿಸಿಲಿನ ನಾಡು ಎಂದೇ ಖ್ಯಾತಿ ಪಡೆದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು ಕೆಂಭಾವಿ ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ತಾಪಮಾನ 40 ರಿಂದ 42 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂಜಾನೆಯಿಂದಲೇ ಬೇಸಿಗೆಯ ಸೆಕೆ ತಾಳಲಾರದೆ ಅನೇಕರು ಮರ ಗಿಡ ಆಸರೆಗೆ ಮೊರೆ ಹೋಗುತ್ತಿದ್ದರೆ ಇನ್ನು ಕೆಲವರು ಕೃತಕ ಗಾಳಿ ಸುಸುವ ಫ್ಯಾನ, ಎಸಿ, ಕೂಲರ್ ಮೊರೆ ಹೋಗುತ್ತಿದ್ದಾರೆ.
ಈ ಮಧ್ಯೆ ಬಿಸಿಲಿನ ತಾಪ ತೀರಿಸಿಕೊಳ್ಳಲು ಎಳೆನೀರು, ಕಬ್ಬಿನ ರಸ, ಮಜ್ಜಿಗೆ ಹಾಗೂ ತಂಪುಪಾನೀಯಗಳತ್ತ ಜನ ಮೊರೆಹೋಗುತ್ತಿರುವ ದೃಶ್ಯ ಸರ್ವೆಸಾಮಾನ್ಯವಾಗಿದೆ. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಹೊರತಾಗಿಲ್ಲ. ಗ್ರಾಮಗಳಲ್ಲಿ ಹೆಚ್ಚಾಗಿ ವಿದ್ಯುತ್ ಕೈ ಕೊಡುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೆ ಜನತೆ ಮರಗಳ ನೆರಳಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಬೀದಿ ಬದಿ ತಿರುಗಾಡುವ ಕುದುರೆ, ನಾಯಿ, ದನಕರುಗಳು ಬಿಸಿಲಿನ ತಾಪಕ್ಕೆ ನಲುಗಿದ್ದು ನೆರಳಿದ್ದೆಡೆ ಪ್ರಾಣಿಗಳು ಧಾವಿಸಿ ಬರುತ್ತಿರುವ ದೃರ್ಶಯ ಸಾಮಾನ್ಯವಾಗಿದೆ. ಮಧ್ಯಾಹ್ನ ಡಾಂಬರ ರಸ್ತೆಯಲ್ಲಿ ಬೆಂಕಿ ಉಂಡೆ ಉಗುಳಿದ ಅನುಭವವಾಗುತ್ತಿದ್ದು ದ್ವಿಚಕ್ರ ವಾಹನ ಸಾವಾರರಿಗೆ ಮಾರಕವಾಗಿ ಪರಿಣಮಿಸಿದೆ.
ಮುಂಜಾನೆ ಬಿಸಿನಿಂದ ಕಂಗೆಡುತ್ತಿರುವ ಜನತೆಗೆ ರಾತ್ರಿಯಾಗುತ್ತಿದ್ದಂತೆ ಭೂಮಿಯಿಂದ ಹೊರಸೂಸುವ ಬಿಸಿಗಾಳಿಗೆ ಮತ್ತಷ್ಟು ಹೈರಾಣಾಗುವಂತೆ ಮಾಡಿದೆ. ಇದರಿಂದ ವೃದ್ಧರ ಹಾಗೂ ಮಕ್ಕಳ ಪಾಡು ಹೇಳತೀರದಾಗಿದೆ. ಬಿರು ಬೇಸಿಗೆಯಿಂದ ಈಗಾಗಲೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಬಾವಿ ಹಾಗೂ ಮನೆಗಳಲ್ಲಿನ ಕೊಳವೆ ಬಾವಿಗಳು ಸಂಪೂರ್ಣ ಬತ್ತಿದ್ದು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಾಣಿಗಳು ಸಹ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಟಿನ್ ಶೆಡಗಳಲ್ಲಿ ಆಶ್ರಯ ಪಡೆಯುತ್ತಿವೆ

ಹೆಚ್ಚಿದ ತಂಪುಪಾನೀಯ ವ್ಯಾಪಾರ : ಪಟ್ಟಣದಲ್ಲಿ ಮಧ್ಯಾಹ್ನ ತಂಪು ಪಾನೀಯ ಅಂಗಡಿಗಳಲ್ಲಿ ಕಾಲಿಡದಷ್ಟು ಗ್ರಾಹಕರು ಜಮಾಯಿಸುತ್ತಿದ್ದಾರೆ. ಕಬ್ಬಿನ ಹಾಲು, ಹಣ್ಣಿನ ಜ್ಯೂಸ್, ನಿಂಬೆ ಪಾನಕ, ಜೀರಾ ಸೋಡಾಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಜ್ಯೂಸ್ ಅಂಗಡಿ ಮಾಲೀಕ ಶರಣಪ್ಪ ಕುಂಬಾರ.

ಕಳೆದ ಐದು ದಿನಗಳಿಂದ ಪಟ್ಟಣದಲ್ಲಿ ಅತೀ ಹೆಚ್ಚಿಗೆ ಬಿಸಲಿನ ತಾಪಮಾನವಿದ್ದು ಇದರಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಜನತೆ ಆದಷ್ಟು ಮನೆಯಿಂದ ಹೊರಬರದೆ ಮನೆಯಲ್ಲಿಯೆ ತಯಾರಿಸಿದ ತಂಪು ಪಾನೀಯಗಳನ್ನು ಸೇವಿಸುವುದು ಮತ್ತು ಹೆಚ್ಚು ನೀರು ಕುಡಿಯುವುದನ್ನು ಮಾಡಬೇಕು ತಿಳುವಾದ ಅಥವಾ ಕಾಟನ್ ಬಟ್ಟೆಗಳನ್ನು ಧರಿಸುವುದು ಸೂಕ್ತ
.
ಡಾ. ಗಿರೀಶ ಕುಲಕರ್ಣಿ,
ವೈದ್ಯಾಧಿಕಾರಿಗಳು