ಬಿಸಿಲಿನಿಂದ ಮುಕ್ತಿ ಸಾಧ್ಯವಿಲ್ಲ

ಬೆಂಗಳೂರು,ಏ.೨೮-ಕರ್ನಾಟಕದ ಜನತೆಗೆ ಇನ್ನೂ ಕೆಲ ದಿನಗಳ ಕಾಲ ಬಿಸಿಲಿನಿಂದ ಮುಕ್ತಿ ಇಲ್ಲ ಎಂದು ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ಬೆಂಗಳೂರಿನಲ್ಲಿ ಏಪ್ರಿಲ್ ೩೦ ಮತ್ತು ಮೇ ೩ ರ ನಡುವೆ ಸ್ವಲ್ಪ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲಿನ ಝಳಕ್ಕೆ ಬೆಂಗಳೂರಿನ ಜನತೆ ತತ್ತರಿಸಿದ್ದಾರೆ. ಇದರ ನಡುವೆ ನೀರಿನ ಸಮಸ್ಯೆಯೂ ಕೂಡಾ ಎದುರಾಗಿದೆ.ರಾಜ್ಯಕ್ಕೆ ಮಳೆಯ ಅವಶ್ಯಕತೆ ಇದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ೩೬-೩೭ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ೩೮ ಡಿಗ್ರಿ ತಾಪಮಾನ ಇತ್ತು
ರಾಯಚೂರು, ಚಿತ್ರದುರ್ಗ, ವಿಜಯಪುರ, ಹಾಸನ, ದಾವಣಗೆರೆ, ಬೀದರ್, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಮೇ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಪ್ರಮುಖವಾಗಿ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಬಿಸಿಲಿನ ಝಳ ಉಂಟಾಗಲಿದೆ.
ಗದಗ, ಕಲಬುರ್ಗಿ, ಬಾಗಲಕೋಟೆ, ಕೊಪ್ಪಳ, ಬೀದರ್, ಚಿಕ್ಕಬಳ್ಳಾಪುರ, ವಿಜಯಪುರ, ಹಾವೇರಿ, ಮೈಸೂರು, ರಾಯಚೂರು, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ವಿಜಯನಗರ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕಲಬುರ್ಗಿ, ರಾಯಚೂರು, ಬಾಗಲಕೋಟೆಯಲ್ಲಿ ಗರಿಷ್ಠ ೪೨ ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಒಣ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ೩ ದಿನಗಳ ಕಾಲ ಬಿಸಿಲು ಮತ್ತು ಒಣ ಹವೆ ಮುಂದುವರೆಯಲಿದ್ದು, ಸಾಮಾನ್ಯ ದಿನಗಳಿಗಿಂತ ೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.