ಬಿಸಿಲಿಗೆ ಬಸವಳಿದ ಜನ: ನಿತ್ಯ ಬೆವರಿನ ಸ್ನಾನ

ಹುಸೇನಪ್ಪ ಗಂಜಳ್ಳಿ
ರಾಯಚೂರು, ಮೇ.೧೯-ಜಿಲ್ಲೆಯಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ. ಅದರಲ್ಲೂ ಕಳೆದ ಒಂದು ವಾರದಿಂದ ಬಿಸಿಲಿನ ಪ್ರಖರತೆ ತೀವ್ರಗೊಂಡಿದ್ದು ಸೂರ್ಯನ ತಾಪದಿಂದ ರಾಯಚೂರು ಜನರು ಕಂಗಲಾಗಿದ್ದಾರೆ.
ಇಲ್ಲಿನ ಉಷ್ಣಾಂಶ ಗರಿಷ್ಠ ೪೧ ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ೪೦ ಡಿಗ್ರಿ ಸೆಲ್ಸಿಯಸ್ ಆಗಿದೆ. ಅಲ್ಲದೇ ಶೇ ೮೦ರಷ್ಟು ಆದ್ರ್ರತೆ ಇರುವುದರಿಂದ ವಿಪರೀತ ಸೆಕೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಅಲ್ಲಲ್ಲಿ ಮಳೆ ಸುರಿದರೂ ವಾತಾವರಣದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಹಗಲಿಡೀ ಸೂರ್ಯನ ಆರ್ಭಟ ಹೆಚ್ಚಾಗಿದೆ.
ಬಿಸಿಲ ಧಗೆಯಿಂದಾಗಿ ಜನ ಹೊರಗಡೆ ಬರದೇ ತತ್ತರಿಸುತ್ತಿದ್ದಾರೆ. ಮೇ ಅಂತ್ಯದಲ್ಲಿ ಬಿಸಿಲಿನ ಪ್ರಖರತೆ ದಿನಕಳೆದಂತೆ ಮತ್ತಿಷ್ಟು ಹೆಚ್ಚುತ್ತಿದೆ. ಬಿಸಲಿನ ತಾಪಮಾನ ಹೆಚ್ಚಾಗಿರುವದರಿಂದ ರಾಯಚೂರು ಜನರು ಏನು ಬಿಸಲು ಮಾರಾಯ ಎಂದು ಬಸವಳಿಯುತ್ತಿದ್ದಾರೆ.
ಜನರು ಬಿಸಿಲಿನ ಧಗೆ ನಿವಾರಣಿಗಾಗಿ ನಾನಾ ಕಸರತ್ತು ಮಾಡುವಂತಾಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಬಿಸಲಿನ ಪ್ರಖರತೆಯಿಂದ ಈ ಪರಿಯ ಬಿಸಿಲು ಸುಡಲಾರಂಭಿಸಿದ್ದು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬಿಸಲಿನ ತಾಪಮಾನ ದಿನ ದಿನಕ್ಕೆ ತೀವ್ರಗೊಳ್ಳುವದರಿಂದ ಮುಂಜಾಗ್ರತ ವಹಿಸಬೇಕು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಎಚ್ಚರಿಕೆ ನೀಡಿದೆ.
ಬೆಳಗ್ಗಿನಿಂದ ಸಂಜೆವರೆಗೆ ಬಿಸಿಲಿನ ಹೊಡೆತ ಜೋರಾಗಿದ್ದು, ಸೆಕೆ ಇರುವುದರಿಂದ ಜನರಿಗೆ ಬೆವರಿನ ಸ್ನಾನ ಆಗುತ್ತಿದೆ. ಜನ ತಮ್ಮ ಕೆಲಸ ಕಾರ್ಯಕ್ಕಾಗಿ ಮನೆ ಬಿಟ್ಟು ತೆರಳಲು ಹಿಂಜರಿಯುತ್ತಿದ್ದು, ಬಿಸಿಲಿನ ಝಳ ತಗ್ಗಿಸಿಕೊಳ್ಳಲು ಮನೆಯಲ್ಲಿ ಫ್ಯಾನ್, ಏರ್ ಕೂಲರ್ ಹಾಗೂ ಹವಾನಿ ಯಂತ್ರಿತಕ್ಕೆ (ಎಸಿ) ಮೊರೆ ಹೋಗಿದ್ದಾರೆ. ಸೂರ್ಯನ ಪ್ರಕರತೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಕೊಡೆ ಹಿಡಿದು ಸಾಗುತ್ತಿರುವುದು ಕಂಡುಬರುತ್ತಿದೆ. ಬೀದಿಬದಿ ವ್ಯಾಪಾರಿಗಳು ಮರದ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.
ಬಿಸಿಲಿನಿಂದ ತಣಿಸಿಕೊಳ್ಳಲು ಬಾಲಕರು ಹಾಗೂ ಯುವಕರು ತೆರೆದ ಬಾವಿಗಳಲ್ಲಿ, ನದಿಗಳಲ್ಲಿ ಈಜಾಡುವುದು ಇದೀಗ ಸಾಮಾನ್ಯವಾಗುತ್ತಿದೆ. ಬೆಳಿಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಯಾದರೆ ಸಾಕು ಜನರು ಮನೆ ಸೇರಿಕೊಳ್ಳುವಂತಾಗಿದೆ. ಮನೆಯಲ್ಲಿರುವ ಯಾವುದೇ ವಸ್ತುವನ್ನು ಮುಟ್ಟಿದರೂ ಬೆಂಕಿಯನ್ನು ಮುಟ್ಟಿದ ಅನುಭವ ಆಗುತ್ತದೆ. ಮನೆಯಲ್ಲಿ ಫ್ಯಾನ್ ಹಾಕಿದರೆ ಅದರಿಂದಲೂ ಬಿಸಿಗಾಳಿ ಸೂಸುತ್ತಿದೆ.
ಇನ್ನೂ ಟೀನ್ ಶೆಡ್‌ನಲ್ಲಿ ಜೀವನವನ್ನು ಸಾಗಿಸುವ ಬಡ ಕುಟುಂಬದವರ ಬದುಕು ಬಾಡಿ ಹೋಗುತ್ತಿದೆ. ಪ್ರಖರವಾದ ಬಿಸಿಲಿಗೆ ಟೀನ್‌ಗಳು ಸುಡುತ್ತಿವೆ. ಅದರಿಂದ ಗ್ರಾಮೀಣ ಪ್ರದೇಶ ಜನರು ಎಲ್ಲೆಡೆ ಗಿಡ, ಮರಗಳ ನೆರಳಿನ ಆಶ್ರಯ ಪಡೆದು ದಣಿವಾರಿಸಿಕೊಳ್ಳುವುದು ಸಾಮಾನ್ಯವಾಗಿದೆ.
ರಣ ಬಿಸಲಿಗೆ ಬೆವರುತ್ತಿರುವ ಜನ ತಮ್ಮ ಕೆಲಸ ಕಾರ್ಯಗಳನ್ನು ಬೇಗನೆ ಮುಗಿಸಿ ಸೂರ್ಯ ನೆತ್ತಿಗೇರುವ ಮುನ್ನವೆ ಮನೆ ಸೇರಿಕೊಳ್ಳುತ್ತಿದ್ದಾರೆ.
ಏರುತ್ತಿದೆ ಬಿಸಿಲಿನ ಧಗೆ:
ಸೂರ್ಯದೇವನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಲೂ ಕೂಡ ಸಾವು ಸಂಭವಸುವ ಸಾಧ್ಯತೆಯಿದೆ ಎಂದು ಅಪಾಯಕಾರಿ ಮಾಹಿತಿ ಒಂದು ಹೊರಬಿದ್ದಿದೆ. ದಿನಕಳೆದಂತೆ
ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಪ್ರಖರತೆ ತೀವ್ರಗೊಳ್ಳುತ್ತಿದೆ.
ತಂಪು ಪಾನೀಯಗಳಿಗೆ ಬೇಡಿಕೆ: ಬಾಯಾರಿಕೆ ತಣಿಸಲು ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದು, ಎಳನೀರು, ಹಣ್ಣಿನ ಜ್ಯೂಸ್ ಹಾಗೂ ಲಿಂಬು ಸೋಡಕ್ಕೆ ಹೆಚ್ಚು ಬೇಡಿಕೆ ಬಂದಿದೆ. ನಗರದ ತಂಪು ಪಾನೀಯ ಅಂಗಡಿಗಳಲ್ಲಿ ಜನರ ದಂಡು ಕಂಡುಬರುತ್ತಿದೆ. ಅಲ್ಲದೇ ಐಸ್‌ಕ್ರೀಮ್ ವ್ಯಾಪಾರವೂ ಭರ್ಜರಿಯಾಗಿ ಸಾಗಿದೆ.
ದಾಹ ನೀಗಿಸುವ ಲಿಂಬು ಸೋಡ ಬೇಸಿಗೆ ಕಾಲದಲ್ಲಿ ಹೆಚ್ಚಿನ ಬೇಡಿಕೆ ಇದೆ. ಒಂದು ಗ್ಲಾಸ್ ಲಿಂಬು ಸೋಡದ ಬೆಲೆ ರೂ.೨೦ ಆಗಿದ್ದು, ನಿತ್ಯ ೧೫೦ ಗ್ಲಾಸ್ ಜ್ಯೂಸ್ ಮಾರಾಟವಾಗುತ್ತದೆ. ಇದನ್ನು ಸಿಹಿ ಹಾಗೂ ಉಪ್ಪು ಎರಡೂ ರೀತಿಯ ರುಚಿಯಲ್ಲಿ ಮಾಡಿಕೊಡಲಾಗುವುದು. ನಮ್ಮಲ್ಲಿ ಇತರೆ ಬಾಟಲಿ ಜ್ಯೂಸ್‌ಗಳು ಲಭ್ಯವಿದ್ದರೂ ಲಿಂಬು ಸೋಡವನ್ನೇ ಜನರು ಹೆಚ್ಚು ಕೇಳುತ್ತಾರೆ ಎನ್ನುತ್ತಾರೆ ವ್ಯಾಪಾರಸ್ಥರು.

ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ ಇದರಿಂದ ಸಾರ್ವಜನಿಕರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ ಬಿಸಲಿನ ತಾಪಮಾನ ಹೆಚ್ಚಳದಿಂದ ವ್ಯಾಪಾರಸ್ಥರ ಮೇಲೆ ಪ್ರಭಾವ ಬೀರಿದೆ.
ಭಾಸ್ಕರ್ ನೆಟ್ ಕಫೇ ಮಾಲೀಕ ತಹಸೀಲ್ದಾರ್ ಕಚೇರಿ ರಸ್ತೆ

ಬಿಸಿಲು ನಾಡಿನಲ್ಲಿ ಬಿಸಲಿನ ರಣಕೇಕೆ ದಿನದಿನಕ್ಕೆ ಏರಿಕೆ ಆಗಿರುವದರಿಂದ ಹಿರಿಯ ನಾಗರೀಕರು ಮತ್ತು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದೆ. ಅನವಶ್ಯಕವಾಗಿ ಹೊರಗಡೆ ಬರಬೇಡಿ. ಬಿಸಿಲಿನ ಕಾವು ನಿಂದ ಮಕ್ಕಳಿಗೆ ನೀರು ದಾಹ ಹೆಚ್ಚಾಗುತ್ತದೆ ಇದರಿಂದ ಪೋಷಕರು ಮಕ್ಕಳಿಗೆ ಹೆಚ್ಚು ನೀರು ಕುಡಿಸಬೇಕು.
ಆನಂದ ಏಗನೂರು ಸಾಮಾಜಿಕ ಕಾರ್ಯಕರ್ತ