
ಹೈದರಾಬಾದ್, ಮೇ.೧೬- ತೆಲಂಗಾಣದಲ್ಲಿ ಬಿಸಿಲಿನ ತಾಪಮಾನಕ್ಕೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿನ ಮಂಚಿರ್ಯಾಲ ಜಿಲ್ಲೆಯ ಲಕ್ಷೆಟ್ಟಿಪೇಟೆಯ ಅಂಕತಿವಾಡದ ಕಾನ್‌ಸ್ಟೆಬಲ್ ಮುಟ್ಟೆ ಸಂತೋಷ್ (೪೫) ಮೃತಪಟ್ಟಿದ್ದಾರೆ. ಇವರು ರಾಮಕೃಷ್ಣಾಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು.ಹನುಮಕೊಂಡ ಜಿಲ್ಲೆಯ ಹಾಸನಪರ್ತಿ ತಾಲೂಕಿನ ಸಿದ್ದಾಪುರ ಗ್ರಾಮದ ಮುಸುಕು ಪೆಂಟು (೫೨) ಕೂಲಿ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು. ಸೋಮವಾರ ಗ್ರಾಮದ ಹೊರವಲಯದಲ್ಲಿ ಕೆಲಸ ಮಾಡುತ್ತಿದ್ದ ಪೆಂಟು ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ವಾರಂಗಲ್ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.ಅದೇ ರೀತಿ, ಕುಮುರಂ ಭೀಮ್ ಜಿಲ್ಲೆಯ ಕಗಜನಗರ ಪಟ್ಟಣದ ಬಾಲಾಜಿನಗರದ ಎಸ್‌ಪಿಎಂ ನಿವೃತ್ತ ಕಾರ್ಯಕರ್ತ ಎ.ಪೋಚಯ್ಯ(೭೪) ಸಂಬಂಧಿಕರ ಮದುವೆಗೆ ತೆರಳಿದ ಬಳಿಕ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹೀಗೆ,ಒಟ್ಟು ಆರು ಬಿಸಿಲಿನ ಬೇಗೆಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಬಿಸಿಲಿನ ತಾಪಕ್ಕೆ ರಸ್ತೆಗಳೆಲ್ಲ ಖಾಲಿ ಖಾಲಿ ಆಗಿ ಗೋಚರಿಸುತ್ತಿದ್ದವು. ಸದಾ ಜನದಟ್ಟಣೆಯಿಂದ ಕೂಡಿದ್ದ ಸಚಿವಾಲಯ, ಲುಂಬಿನಿ ಪಾರ್ಕ್, ತೆಲುಗು ಥಲ್ಲಿ ಮೇಲ್ಸೇತುವೆ ಮತ್ತು ಟ್ಯಾಂಕ್‌ಬಂಡ್ ಮಾರ್ಗಗಳು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಬರಡಾಗಿ ಕಾಣ ತೊಡಗುತ್ತಿದ್ದವು.
ಅದರಲ್ಲೂ ಆಂಧ್ರಪ್ರದೇಶದ ನೆಲ್ಲೂರು, ಪ್ರಕಾಶಂ ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೪೬ ಡಿಗ್ರಿ ದಾಟಿದೆ. ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿ ಇಬ್ಬರು ಹಾಗೂ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಒಬ್ಬರು ಬಿಸಿಲಿನ ಬೇಗೆಗೆ ಮೃತಪಟ್ಟಿದ್ದಾರೆ.