ಬಿಸಿಯೂಟ, ಮೊಟ್ಟೆ ವಿತರಣೆಗೆ ಶಿಕ್ಷಕರ ಸಂಘ ಆಗ್ರಹ

ಕೋಲಾರ,ಸೆ,೧೨- ಸರ್ಕಾರಿ ಶಾಲೆಗಳಲ್ಲಿ ಅಕ್ಷರದಾಸೋಹಕ್ಕೆ ಸಾಧಿಲ್ವಾರು ಹಣ ಹಾಗೂ ಆಹಾರ ಧಾನ್ಯಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾ ಅಕ್ಷರದಾಸೋಹ ಉಪನಿರ್ದೇಶಕ ತಿಮ್ಮರಾಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರ ಸಂಘದ ಪದಾಧಿಕಾರಿಗಳು, ಮೇ.೧೬ ರಿಂದಲೇ ೨೦೨೨-೨೩ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿವೆ, ಆದರಂತೆ ಶಾಲೆ ಆರಂಭದ ದಿನದಿಂದಲೇ ಅಕ್ಷರದಾಸೋಹ ಕಾರ್ಯಕ್ರಮ ಶಾಲೆಗಳಲ್ಲಿ ಪ್ರಾರಂಭವಾಗಿದೆ ಎಂದರು.
ಆದರೆ ಕಳೆದ ೪ ತಿಂಗಳಿಂದ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸಾಧಿಲ್ವಾರು ವೆಚ್ಚಕ್ಕಾಗಿ ಅನುದಾನ ಬಿಡುಗಡೆಯಾಗಿಲ್ಲ ಮತ್ತು ಆಹಾರಧಾನ್ಯಗಳು ಸರಬರಾಜಾಗುತ್ತಿಲ್ಲ ಎಂದು ದೂರಿದರು.
ಶಿಕ್ಷಕರು ಕೈಯಿಂದ ಸಾಧಿಲ್ವಾರು ಹಣ ಹಾಕಿ ಬಿಸಿಯೂಟ ನಡೆಸಿಕೊಂಡು ಬರುತ್ತಿದ್ದಾರೆ, ಜತೆಗೆ ಆಹಾರ ಧಾನ್ಯಗಳಾದ ತೊಗರಿಬೇಳೆ, ಅಡುಗೆ ಎಣ್ಣೆ ಎಲ್ಲಾ ಶಾಲೆಗಳಲ್ಲಿ ಮುಗಿದು ಹೋಗಿದ್ದು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಹೆಣಗಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಇದರ ಜತೆಗೆ ಕಳೆದ ಜು.೨೬ ರಿಂದ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸಲು ಇಲಾಖೆ ಆದೇಶ ಮಾಡಿದೆ, ಆದರೆ ಈ ಕಾರ್ಯಕ್ರಮಕ್ಕೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ, ಆದರೂ ಶಿಕ್ಷಕರು ಯಾವುದೇ ಲೋಪವಾದಂತೆ ಕೈಯಿಂದ ಹಣ ಹಾಕಿ ಬಿಸಿಯೂಟ, ಮೊಟ್ಟೆ ಯೋಜನೆಯನ್ನು ಜಾರಿ ಮಾಡುತ್ತಿದ್ದಾರೆ ಎಂದರು.
ಕಳೆದ ಒಂದು ತಿಂಗಳಿಂದ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ತೊಗರಿ ಬೇಳೆ, ಅಡುಗೆ ಎಣ್ಣೆ,ಉಪ್ಪು ಸರಬರಾಜಾಗಿಲ್ಲ, ಆದ್ದರಿಂದ ಕಳೆದ ೪ ತಿಂಗಳಿಂದ ಬಾಕಿ ಇರುವ ಸಾಧಿಲ್ವಾರು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಮೊಟ್ಟೆ ವಿತರಣೆಗೆ ಅಗತ್ಯವಾದ ಅನುದಾನವನ್ನು ಒದಗಿಡಬೇಕು, ಶಿಕ್ಷಕರ ಈ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿದರು.