ಬಿಸಿಯೂಟ ಪುನರಾರಂಭಕ್ಕೆ ಒತ್ತಾಯ

ಆನೇಕಲ್.ಅ.೩೦- ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸರ್ಕಾರದ ವತಿಯಿಂದ ಪೌಷ್ಟಿಕಾಂಶದ ಆಹಾರವನ್ನು ಒದಗಿಸುತ್ತಿತ್ತು ಆದರೆ ಕೊರೋನಾದ ಕಾರಣದಿಂದ ಬಿಸಿಯೂಟದ ವ್ಯವಸ್ಥೆಯನ್ನು ಕಡಿತಗೊಳಿಸಿ ರುವುದು ವಿಷಾದಕರವಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಬಿಸಿಯೂಟವನ್ನು ತಲುಪಿಸಬೇಕು ಎಂದು ಭಾರತೀಯರ ಸೇವಾ ಸಮಿತಿಯ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಡಾ. ಅನಿಲ್ ರೆಡ್ಡಿ ಅವರು ತಿಳಿಸಿದರು.
ಅವರು ತಾಲ್ಲೂಕಿನ ಸರ್ಜಾಪುರ ಗ್ರಾಮ ದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.
ಕೊರೊನಾದಿಂದ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಮಾಡುವ ಪಾಠಗಳಿಂದ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತಿಲ್ಲ ಹಾಗೂ ಮೊಬೈಲ್ ಗಳ ದಾಸರಾಗುತ್ತಿದ್ದಾರೆ ಅದಷ್ಟು ಬೇಗ ಶಾಲೆಗಳಲ್ಲಿ ತರಗತಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಕೊರೊನಾ ನೆಪವೊಡ್ಡಿ ಪಿಯುಸಿ ಪಠ್ಯಕ್ರಮದಲ್ಲಿ ಶೇಕಡಾ ೩೦% ರಷ್ಟು ಕಡಿತ ಘೋಷಿಸಲಾಗಿದ್ದು, ಕತ್ತರಿಸುವ ಭರಾಟೆಯಲ್ಲಿ ಪ್ರಮುಖ ಅಧ್ಯಾಯಗಳನ್ನು ತೆಗೆದು ಹಾಕಿದ್ದಾರೆ ವ್ಯವಹಾರ ಅಧ್ಯಯನದಲ್ಲಿ, ಫೈನಾನ್ಸಿಯಲ್ ಮಾರ್ಕೆಟಿಂಗ್, ಮಾರ್ಕೆಟಿಂಗ್ ಹಾಗೂ ಇತ್ಯಾದಿ ಪ್ರಸ್ತುತ ವಿಷಯಗಳನ್ನು ಕಡಿತ ಮಾಡಲಾಗಿದೆ, ದ್ವಿತೀಯ ಪಿಯುಸಿ ಇತಿಹಾಸ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ತೆಗೆಯಲಾಗಿದೆ, ರಾಜ್ಯಶಾಸ್ತ್ರದಲ್ಲಿ ಭಾರತದ ರಾಜಕೀಯ ನೂತನ ಪ್ರವೃತ್ತಿ, ಅಸ್ಮಿತೆ, ರಾಜಕೀಯದ ಉಗಮ, ಭ್ರಷ್ಟಾಚಾರದ ವಿರುದ್ಧ ಯುವಜನಾಂಗ, ಸಮಕಾಲೀನ ರಾಜಕೀಯ ವಿದ್ಯಮಾನಗಳು, ಸೇರಿದಂತೆ ಪ್ರಮುಖ ವಿಷಯಗಳಿಗೆ ಕತ್ತರಿಸಿದ್ದು ಸರಿಯಲ್ಲವೆಂದರು.
ಭವಿಷ್ಯದ ಶಿಕ್ಷಣಕ್ಕೆ ಅವಶ್ಯವಿರುವ ಅಧ್ಯಯನಗಳನ್ನು ಕಡಿತ ಮಾಡಿರುವುದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಅಧ್ಯಾಯಗಳನ್ನು ಆನ್ಲೈನ್ ಮೂಲಕ ಭೋದಿಸಲಾಗಿದೆಯಾದರು ಅವುಗಳ ಪರಿಪೂರ್ಣ ಜ್ಞಾನವನ್ನು ನೇತ ತರಗತಿಯಲ್ಲಿ ನೀಡಲು ಸಾಧ್ಯ ಹೀಗಾಗಿ ಆನ್ಲೈನ್ ಬೋಧನೆಯ ಆಧಾರದಲ್ಲಿ ಕಡಿತ ಮಾಡಿರುವುದು ಖಂಡನೀಯ, ಪಠ್ಯ ಕಡಿತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಅನೇಕ ಅಧ್ಯಾಯಗಳನ್ನು ಕೈಬಿಟ್ಟಿರುವುದು ಮುಂದಿನ ಶೈಕ್ಷಣಿಕ ಬದುಕಿಗೆ ಮಾರಕವಾಗಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳಿಗೂ ಶೇಕಡ ೭೦ರಷ್ಟು ಪಠ್ಯ ಸಿಗಲಿದೆ ೨೦೨೧-೨೨ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ ೧೦೦ ರಷ್ಟು ಪಠ್ಯ ಇರಲಿದೆ ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಸರಕಾರ ಈ ಬಗ್ಗೆ ಪುನರ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯರ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಚ್.ಎಂ.ರಾಮಚಂದ್ರ, ನಾರಾಯಣಸ್ವಾಮಿ, ಶಿವು, ಹಾಗೂ ಮತ್ತಿತರರು ಹಾಜರಿದ್ದರು.