ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹ

ತುಮಕೂರು, ಜೂ. ೧೭- ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಿಕರಿಗೆ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜುಲೈ ತಿಂಗಳಿನಲ್ಲಿ ಮಂಡಿಸುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ಅವರ ವೇತನವನ್ನು ೬ ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಬಿಸಿಯೂಟ ತಯಾರಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಐಟಿಯುಸಿ ನಾಯಕರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ರವರು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಚರ್ಚಿಸಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಬಿಸಿಯೂಟ ತಯಾರಕರಿಗೆ ಈಗಿರುವ ವೇತನಕ್ಕೆ ಬದಲಾಗಿ ೬ ಸಾವಿರ ರೂ.ಗಳನ್ನು ಹೆಚ್ಚಿಸಲಾಗುವುದೆಂದು ಬೆಳಗಾವಿಯ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಘೋಷಿಸಿದ್ದರು.
ಅದರಂತೆ ಈ ಬಾರಿ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ೬ನೇ ಗ್ಯಾರಂಟಿಯಾಗಿ ಘೋಷಿಸಿ ೨೦೨೩ರ ಜುಲೈ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ಮಂಡಿಸುವ ನೂತನ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ೬ ಸಾವರ ರೂ. ವೇತನವನ್ನು ಹೆಚ್ಚಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಸಂಚಾಲಕ ಕಾಂತರಾಜು, ಉಮಾದೇವಿ, ವನಜಾಕ್ಷಿ ,ಪಾರ್ವತಮ್ಮ, ರಾಧಮ್ಮ, ಪುಷ್ಪಲತಾ, ಸಾವಿತ್ರಮ್ಮ, ಲಕ್ಷ್ಮಮ್ಮ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗಿರೀಶ್, ಕಂಬೇಗೌಡ ಮತ್ತಿತರರು ಉಪಸ್ಥಿತರಿದ್ದರು.