ಬಿಸಿಯೂಟ ನೌಕರರ ಮೂಲ ಸೌಲಭ್ಯಕ್ಕೆ ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು: ಜು: 12: ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಗೈರು ಹಾಜರಿ, ಅಪೌಷ್ಟಿಕತೆ ತಡೆಗಟ್ಟಲು, ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸಹ ವೇತನ ಹೆಚ್ಚಳವಾಗಿಲಿ ಮೂಲಭೂತ ಸೌಲಭ್ಯವಾಗಲಿ ಇಲ್ಲವಾಗಿದೆ ತಕ್ಷಣ ವೇತನ ಹೆಚ್ಚಿಸಿ ಎಂದು ಅಧ್ಯಕ್ಷೆ ರೇಖಾ ಒತ್ತಾಯಿಸಿದರು.
ಅವರು ಇಂದು ಪಟ್ಟಣದ ಅಕ್ಷರ ದಾಸೋಹ ಕಛೇರಿಯ ಅವರಣದಲ್ಲಿ ತಾಲೂಕು ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ 1 ಲಕ್ಷ 17 ಸಾವಿರ ಮಹಿಳೆಯರು ರಾಜ್ಯದ 58 ಲಕ್ಷ 39 ಸಾವಿರ ಬಡ, ರೈತ, ಕೃಷಿಕೂಲಿಕಾರರ, ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿದರೂ ಸಹ ಶೋಷಣೆ ಮಾತ್ರ ತಪ್ಪುತ್ತಿಲ್ಲ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಮೂಲಕ ಬಿಸಿಯೂಟ ಕಾರ್ಯಕರ್ತರನ್ನು ರಕ್ಷಿಸಿ ಅಲ್ಲದೆ ಬಿಸಿಯೂಟ ಯೋಜನೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು, ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡಬೇಕು, ದುಡಿಯುತ್ತಿರುವ ಮಹಿಳೆಯರು ಆಕಸ್ಮಿಕವಾಗಿ ಮರಣ ಹೊಂದಿದ್ದರೆ ಅವರ ಕುಟುಂಬದಲ್ಲಿರುವವರಿಗೆ ಈ ಕೆಲಸ ನೀಡಲು ಆದೇಶಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ 2 ಜನ ಅಡುಗೆಯವರು ಇರಲೇಬೇಕು, ಬಿಸಿಯೂಟ ನೌಕರರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು , ಈಗಾಗಲೇ ಶಾಲೆಯಲ್ಲಿ ಅಡುಗೆ ಕೆಲಸದ ಜೊತೆ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು, ಇನ್ನಿತರ ಕೆಲಸ ಚಾಚು ತಪ್ಪದೇ ಮಾಡುತ್ತಾರೆ. ಶಾಲೆಯಲ್ಲಿ ಈ ಕೆಲಸವನ್ನು ಇವರೇ ಮಾಡುವುದರಿಂದ ಈ ನೌಕರರನ್ನು ‘ಡಿ’ ಗ್ರೂಪ್ ನೌಕರರಾಗಿ ಪರಿಗಣಿಸಬೇಕು. 2023 ರ ಬಜೆಟ್‍ನಲ್ಲಿ ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಘೋಷಣೆಯಾದ ಗೌರವಧನದ ಬಿಡುಗಡೆ ಆದೇಶ ಇನ್ನು ನೀಡಿಲ್ಲ. ಕೂಡಲೇ ಆದೇಶ ಮಾಡಿ, ಹಣ ಬಿಡುಗಡೆ ಮಾಡಬೇಕು, ಬೆಲೆ ಏರಿಕೆಯ ಆಧಾರದಲ್ಲಿ ವೇತನ ಹೆಚ್ಚಳ , ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ 4 ಗಂಟೆ ಕೆಲಸ ಮಾತ್ರವಿದೆ. ಆದರೆ ದಿನ ನಿತ್ಯ 6 ಗಂಟೆಗಳ ಕೆಲಸ ಮಾಡುತ್ತಾರೆ, ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ 6 ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ದ್ರಾಕ್ಷಯಣಿ, ಕೆ.ಸುಶೀಲಾ, ಪಾರ್ವತಮ್ಮ, ಕೆಂಚಮ್ಮ, ಮಲ್ಲೇಶ್ವರಿ, ನಂದಿನಿ, ರೇಣುಕಮ್ಮ, ವಿ.ದೇವಣ್ಣ ಅಧ್ಯಕ್ಷರು ಕಟ್ಟಡ ಕಾರ್ಮಿಕರ ಸಂಘ, ಕಾಲೂಬ್, ಇತರ ಹಲವಾರು ಮುಖಂಡರ ನೇತೃತ್ವದಲ್ಲಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆಯ ದುರುಗಪ್ಪ ಇವರಿಗೆ ಮನವಿ ಪತ್ರ ಸಲ್ಲಿಸಿದರು.

One attachment • Scanned by Gmail