ಬಿಸಿಯೂಟ ಅನುಷ್ಠಾನದಲ್ಲಿ ವಿಫಲ: ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಕಾಂತ ವಾಯ್. ವಂದಾಲ್ ಅಮಾನತ್ತು

ಕಲಬುರಗಿ,ನ.19:ಶಾಲೆಗೆ ಅನಧಿಕೃತವಾಗಿ ಗೈರಾಗಿ ಮೇಲಾಧಿಕಾರಿಗಳ ನೋಟೀಸ್‍ಗಳಿಗೆ ಉತ್ತರ ನೀಡದೆ ಹಾಗೂ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಫಲರಾಗಿ ಕರ್ತವ್ಯ ಲೋಪವೆಸಗಿರುವ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಬಿಲ್ವಾಡ್ (ಕೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಕಾಂತ ವಾಯ್. ವಂದಾಲ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತುಗೊಳಿಸಿ ಡಿ.ಡಿ.ಪಿ.ಐ ಅಶೋಕ ಬಿ. ಭಜಂತ್ರಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಕಳೆದ ನ.17 ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಅವರು ಶಾಲೆಗೆ ಭೇಟಿ ನೀಡಿದಾಗ ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಕಾಂತ ವಾಯ್. ವಂದಾಲ್ ಅವರು ಅನಧಿಕೃತ ಗೈರಾಗಿದ್ದರು. ಅಲ್ಲದೆ ಕಳೆದ ಸೆಪ್ಟೆಂಬರ್ 6 ರಿಂದ 11ರ ವರೆಗೆ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಗೈರಾಗಿರುವುದು ಸಹ ಅಲ್ಲಿ ಕಂಡುಬಂದಿತ್ತು. ಇದಲ್ಲದೆ ಶಾಲೆಯಲ್ಲಿ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಗ್ರಾಮಸ್ಥರು ಜಿ.ಪಂ. ಸಿ.ಇ.ಓ. ಇವರ ಬಳಿ ದೂರಿದ್ದರು.
ಶಾಲೆಗೆ ಅನಧಿಕೃತ ಗೈರು ಹಾಜರಿ ಮತ್ತು ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನದಲ್ಲಿ ವಿಫಲ ಮತ್ತು ಕರ್ತವ್ಯ ಲೋಪದ ಕಾರಣ ಕರ್ನಾಟಕ ನಾಗರಿಕ ಸೇವಾ ನಿಯಮಗಳು (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) 1957ರ ನಿಯಮ 10(1)ರನ್ವಯ ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.
ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಕಾಂತ ವಾಯ್. ವಂದಾಲ್ ಇವರು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1966ರ ನಿಯಮ 98(ಎ) ಮತ್ತು ಸರ್ಕಾರದ ಅಧಿಸೂಚನೆ ದಿನಾಂಕ: 10-08-1987ರ ಪ್ರಕಾರ ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದೆಂದು ಆದೇಶದಲ್ಲಿ ತಿಳಿಸಲಾಗಿದೆ.