
(ಸಂಜೆವಾಣಿ ವಾರ್ತೆ)
ಇಳಕಲ್,ಆ.18: ಶಾಲಾ ವಿದ್ಯಾರ್ಥಿಗಳಿಗಾಗಿ ಸಿದ್ದಪಡಿಸಿದ ಬಿಸಿ ಊಟದಲ್ಲಿ ಹುಳುಗಳು ಕಂಡುಬಂದ ಹಿನ್ನಲೆ ಮಕ್ಕಳು ಊಟಕ್ಕೆಂದು ಹಾಕಿಸಿಕೊಂಡಿದ್ದ ಅನ್ನವನ್ನು ಚೆಲ್ಲಿ ಮನೆಗೆ ತೆರಳಿ ಊಟ ಮಾಡಿಕೊಂಡು ಶಾಲೆಗೆ ಮತ್ತೆ ಹಾಜರಾಗಿರುವ ಘಟನೆ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರದಂದು ಸಂಭವಿಸಿದೆ.
ಮಧ್ಯಾಹ್ನ ಊಟಕ್ಕೆ ಬಂದ ಶಾಲಾ ವಿದ್ಯಾರ್ಥಿಗಳು ತಟ್ಟೆಯಲ್ಲಿ ಹಾಕಿಸಿಕೊಂಡ ಅನ್ನದಲ್ಲಿ ಹುಳುಗಳು ಇರುವದನ್ನು ಗಮನಿಸಿ ಊಟವನ್ನು ಚೆಲ್ಲಿ ಶಾಲಾ ಶಿಕ್ಷಕರಿಗೆ ಹೇಳಿ ಊಟಕ್ಕೆ ಮನೆಗೆ ಹೋದಾಗ ಪಾಲಕರಿಗೆ ಬಿಸಿ ಊಟದಲ್ಲಿ ಹುಳುಗಳು ಬಂದಿರುವ ವಿಷಯ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಕ್ಕಳ ಪಾಲಕರು ಶಾಲೆಗೆ ದೌಡಾಯಿಸಿ ಮುಖ್ಯೋಪಾಧ್ಯಾಯ ಎಚ್.ಎಸ್.ಬಂಡಿವಡ್ಡರ ಹಾಗೂ ಅಡುಗೆ ಸಿಬ್ಬಂಧಿಗಳಿಗೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಕ್ಕಳ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಹೊಣೆ ಎಂಬ ಪಾಲಕರ ಪ್ರಶ್ನೆಗೆ ಅಡುಗೆ ಸಿಬ್ಬಂಧಿಗಳು ಇದೊಂದು ಬಾರಿ ತಪ್ಪಾಗಿದೆ ಮತ್ತೆ ಹೀಗೆ ಆಗುವದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದು ಪಾಲಕರ ಕೆಂಗಣ್ಣಿಗೆ ಗುರಿಯಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇಳಕಲ್ ತಾಲೂಕೂ ದಂಡಾಧಿಕಾರಿ ನಿಂಗಪ್ಪ ಬಿರಾದಾರ ಮುಖ್ಯೋಪಾಧ್ಯಾಯ ಎಚ್.ಎಸ್.ಬಂಡಿವಡ್ಡರ ಹಾಗೂ ಅಡುಗೆ ಸಿಬ್ಬಂಧಿಗಳಿಗೆ ಘಟನೆಯ ಕುರಿತು ಮಾಹಿತಿ ಪಡೆದು ಬಿಸಿ ಊಟದ ಕೋಣಿಯನ್ನು ಹಾಗೂ ಶೇಖರಿಸಿಡಲಾಗಿದ್ದ ಪದಾರ್ಥಗಳ ಪರಿಶಿಲನೆ ನಡೆಸಿದರು. ನಂತರ ಮುಖ್ಯೋಪಾಧ್ಯಾಯ ಹಾಗೂ ಅಡುಗೆ ಸಿಬ್ಬಂಧಿಗಳಿಗೆ ನಿಮ್ಮ ಮನೆಯಲ್ಲಿಯೂ ಇದೇ ರೀತಿ ಅಡುಗೆ ಮಾಡಿ ನಿಮ್ಮ ಮಕ್ಕಳಿಗೆ ಊಟಕ್ಕೆ ಕೊಡುತ್ತೀರಾ, ಈ ಮಕ್ಕಳು ನಿಮ್ಮ ಮಕ್ಕಳಿದ್ದಂತೆ ಅಲ್ಲವೇ ಈ ಬೇಜವಾಬ್ದಾರಿಗೆ ತಕ್ಕ ಶಿಕ್ಷೆ ಅನುಭವಿಸಬೇಕಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಶಾಲೆಯಲ್ಲಿ ಜಮಾವಣೆಗೊಂಡಿದ್ದ ಪಾಲಕರೊಂದಿಗೆ ಮಾತನಾಡಿದ ತಹಶೀಲ್ದಾರರು ಕೂಡಲೇ ಈ ಘಟನೆಯ ಕುರಿತು ಸೂಕ್ತ ಕ್ರಮ ಜರುಗಿಸಲಾಗುವದು ಹಾಗೂ ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳುವದಾಗಿ ಭರವಸೆ ನೀಡಿದರು.
ಮಕ್ಕಳು ಸೇವಿಸುವ ಬಿಸಿ ಊಟದಲ್ಲಿ ಬಾಲಹುಳ ಮತ್ತು ನುಸಿ ಕಂಡುಬಂದ ಹಿನ್ನಲೆ ನಿಶ್ಕಾಳಜಿಯಿಂದ ಮಕ್ಕಳ ಆರೋಗ್ಯದ ಜೊತೆ ಚಲ್ಲಾಟವಾಡಿದ ಅಡುಗೆ ಸಿಬ್ಬಂಧಿಗಳನ್ನು ಈ ಕೂಡಲೆ ಬದಲಾಯಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಕೊಂಕಲ್ ಅವರಿಗೆ ಸೂಚಿಸಿದ್ದೇನೆ.
ನಿಂಗಪ್ಪ ಬಿರಾದಾರ,
ತಹಶೀಲ್ದಾರರು ಇಳಕಲ್.