ಬಿಸಿಯೂಟದಲ್ಲಿ ಹಲ್ಲಿ: ಮಕ್ಕಳು ಅಸ್ವಸ್ಥ

ಧಾರವಾಡ, ಮಾ.29: ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ನೀಡಿದಾಗ, ಅನ್ನದಲ್ಲಿ ಹಲ್ಲಿಯಂತ ಹುಳು ಕಂಡುಬಂದ್ದರಿಂದ, ಊಟ ಸೇವಿಸಿದ ಸುಮಾರು 36 ಮಕ್ಕಳಲ್ಲಿ ವಾಂತಿ, ವಾಕರಿಕೆ ಕಂಡುಬಂದಿತು.
ವಿಷಯ ತಿಳಿದ ತಕ್ಷಣ ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನವಲಗುಂದ ತಾಲೂಕಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು, ಅದರಂತೆ ಕ್ರಮ ಕೈಗೊಂಡಿದ್ದಾರೆ. ಎಲ್ಲ ಮಕ್ಕಳು ಗುಣಮುಖರಾಗಿ, ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗುಡಿಸಾಗರ ಪ್ರಾಥಮಿಕ ಶಾಲೆಗೆ ಇಂದು ಮದ್ಯಾಹ್ನದ ಪೂರೈಸಿದ ಊಟದಲ್ಲಿ ಹಲ್ಲಿಯಂತ ಹುಳು ಕಂಡು ಬಂದಿದ್ದರಿಂದ, ಊಟ ಮಾಡಿದ್ದ ಕೆಲವು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಬಿಸಿದ್ದಾರೆ. ಕೆಲವು ಮಕ್ಕಳು ಹೆದರಿಕೆಯಿಂದ ವಾಕರಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಶಾಲಾ ಮುಖ್ಯಸ್ಥರಿಂದ ಈ ಮಾಹಿತಿ ಬಂದ ತಕ್ಷಣ, ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ ಅಗರವಾಲ್ ಅವರಿಗೆ ತಕ್ಷಣ ಸ್ಥಳಕ್ಕೆ ತೆರಳಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿತ್ತು.
ಅದರಂತೆ ಅವರು ಮಕ್ಕಳಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಮತ್ತು ಮುಂಜಾಗೃತೆಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ನವಲಗುಂದ ತಾಲೂಕಾ ಆಸ್ಪತ್ರೆಗೆ ಸುಮಾರು 36 ಮಕ್ಕಳನ್ನು ದಾಖಲಿಸಿದ್ದಾರೆ. ಅವರಿಗೆ ನವಲಗುಂದ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ವಿದ್ಯಾ ಹಾಗೂ ಡಾ. ಮಹೇಶ ನೇತೃತ್ವದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಿದ್ದು ಬಹುತೇಕರು ಚೇತರಿಕೆಯಾಗಿದ್ದಾರೆ. 6 ಮಕ್ಕಳಿಗೆ ಮಾತ್ರ ವಾಂತಿ ಕಾರಣಕ್ಕಾಗಿ ಸಲೈನ್ ಹಚ್ಚಲಾಗಿತ್ತು. ಅವರು ಸಹ ಸಂಜೆಯೊಳಗೆ ಸಂಪೂರ್ಣ ಚೇತರಿಕೆ ಆಗಿದ್ದಾರೆ. ಯಾವುದೆ ಮಕ್ಕಳಿಗೆ ಅಪಾಯವಿಲ್ಲ. ಪಾಲಕರು ಗಾಬರಿಯಾಗದಂತೆ ಡಾ.ಶಶಿ ಪಾಟೀಲ ಅವರು ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಡಿ.ಎಸ್.ಓ ಡಾ.ಸುಜಾತಾ ಹಸವಿಮಠ, ಆರ್‍ಸಿಎಚ್‍ಓ ಡಾ.ಎಸ್.ಎಂ.ಹೊನಕೇರಿ ಅವರು ಸ್ಥಳದಲ್ಲಿದ್ದು, ಮಕ್ಕಳ ಆರೋಗ್ಯ ಚಿಕಿತ್ಸೆ ಬಗ್ಗೆ ನಿಗಾವಹಿಸಿ, ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.