ರಾಯಚೂರು,ಜುಲೈ.೨ – ಊಟದಲ್ಲಿ ಹಲ್ಲಿ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ರಾಯಚೂರು ತಾಲೂಕಿನ ಅಪ್ಪನದೊಡ್ಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂದೆ ಜಮಾವಣೆಗೊಂಡಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗಾಗಿ ಮಧ್ಯಾಹ್ನ ಬಿಸಿಯೂಟಕ್ಕೆ ಉಪ್ಪಿಟ್ಟು ಮಾಡಿದ್ದರು. ಅದನ್ನು ಎಲ್ಲ ಮಕ್ಕಳಿಗೆ ಬಡಿಸಲಾಗಿದ್ದು, ಈ ವೇಳೆ ಪಾತ್ರೆಯ ಅಡಿಯಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ.ಅಷ್ಟರಲ್ಲಾಗಲೇ ಉಪ್ಪಿಟ್ಟು ತಿಂದ ಹಲವು ಮಕ್ಕಳಿಗೆ ಹೊಟ್ಟೆ ತೊಳೆಸಲು ಆರಂಭವಾಯಿತು. ಬಳಿಕ ಕೆಲವು ಮಕ್ಕಳು ವಾಂತಿ ಮಾಡಲು ಶುರು ಮಾಡಿದರು. ಈ ಪೈಕಿ ಮೂರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಯಾಪಲದಿನ್ನಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ಶಾಲೆಯಲ್ಲಿ ಇಬ್ಬರು ಅಡುಗೆ ಸಿಬ್ಬಂದಿಯ ನಿರ್ಲಕ್ಷದಿಂದ ಈ ಘಟನೆ ನಡೆದಿದೆ ಎಂದು ಆಪಾದಿಸಲಾಗಿದೆ. ಇನ್ನು ಇದೀಗ ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ. ಶಾಲೆಯ ಆವರಣದಲ್ಲಿ ವೈದ್ಯರು ಮೊಕ್ಕಾಂ ಹೂಡಿದ್ದಾರೆ. ಅಲ್ಲದೆ ಕ್ಯಾಂಪಸ್‌ನಲ್ಲಿ ಪೋಷಕರು ಕೂಡಾ ಜಮಾಯಿಸಿದ್ದಾರೆ. ಎಲ್ಲ ಮಕ್ಕಳ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿರುವುದಾಗಿ ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭೦ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಘಟನೆ ಜರುಗಿದೆ.
ವಿಷಯ ತಿಳಿಯುತ್ತಿದ್ದಂತೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರವರು ದಿಢೀರನೇ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ಶಾಸಕರು, ಫೋಷಕರು ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇಲ್ಲ. ಎಲ್ಲಾ ಮಕ್ಕಳ ಆರೋಗ್ಯ ಸಹಜ ಸ್ಥಿತಿಗೆ ಬಂದಿದೆ ಎಂದರು.
ನಂತರ ಅಪ್ಪನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಗೆ ಬೇಟಿ ನೀಡಿ ಅಕ್ಕಿ, ಬೇಳೆ ಇತರ ಅಡುಗೆ ಸಾಮಾಗ್ರಿಗಳನ್ನು ಮತ್ತು ಸ್ವಾಚ್ಚತೆಯನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬಾಸ್ಕರ್ ಗೌಡ,ಶ್ರೀನಿವಾಸ ರೆಡ್ಡಿ, ವಡ್ಡೆಪಲ್ಲಿ ಸೂಗುರಪ್ಪ ನಾಯಕ, ವೆಂಕಟೇಶ,ಆಂಜಿನೇಯ್ಯ ವಕೀಲರು, ತಿಮ್ಮಪ್ಪ, ಈರಣ್ಣ ಮಡಿವಾಳ ಬಶೀರ್ ರಘುನಾಥನಹಳ್ಳಿ, ಚನ್ನಬಸವ,ಸಾಬಣ್ಣ,ವಿರೇಶ,ಊರಿನ ಮುಖಂಡರುಗಳು ಗ್ರಾಮಸ್ಥರು ಫೋಷರು, ವಿದ್ಯಾರ್ಥಿಗಳು ಡಿಎಸ್ ರವರು,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು,ತಾಲೂಕು ಮಟ್ಟದ ಅಧಿಕಾರಿಗಳು,ಉಪಸ್ಥಿತರಿದ್ದರು.