ಬಿಸಿಎಂ ಅಧಿಕಾರಿ ರಮೇಶ್ ಸಂಗಾ ವಿರುದ್ಧದ ಪ್ರಕರಣಕ್ಕೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ

ಕಲಬುರಗಿ:ಅ.14: ಆಳಂದ್‍ನಲ್ಲಿನ ಲಿಂಗಾಯತ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಕಳೆದ 11ರಂದು ಶ್ರೀರಾಮಸೇನೆಯ ಗೌರವಾಧ್ಯಕ್ಷ ಸಿದ್ದಲಿಂಗ್ ಸ್ವಾಮೀಜಿ ಅವರು ನನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಇಲ್ಲಿನ ಕರ್ನಾಟಕ ಉಚ್ಛ ನ್ಯಾಯಾಲಯವು 12ರಂದು ತಡೆಯಾಜ್ಞೆ ನೀಡಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಜಿ. ಸಂಗಾ ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಎಲ್ಲ ವರದಿಗಳನ್ನು ಮುಚ್ಚಿಟ್ಟು ಕೆಲವು ಕುತಂತ್ರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಳಂದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ಮುಕ್ತಾಯಗೊಳಿಸಿ ಅಂತಿಮ ತನಿಖಾ ವರದಿ ಸಲ್ಲಿಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳು ಸಹ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಉಚ್ಛ ನ್ಯಾಯಾಲಯ ಇದೇ ವಿಷಯದ ಕುರಿತಾದ ಪ್ರಕರಣವನ್ನು ವಜಾಗೊಳಿಸಿದೆ ಎಂದು ತಿಳಿಸಿದರು.
ಎಲ್ಲ ವರದಿಗಳನ್ನು ನ್ಯಾಯಾಲಯದಲ್ಲಿ ಮುಚ್ಚಿಟ್ಟ ಕಿಡಿಗೇಡಿಗಳು ಶಿಕ್ಷೆಗೆ ಅರ್ಹರಾಗಿದ್ದಾರೆ. ಹಾಗೂ ಇಂತವರೆಲ್ಲರ ಮೇಲೆ ಶೀಘ್ರದಲ್ಲಿಯೇ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಕುರಿತು ವಿಚಾರಣೆಯು ಉಚ್ಛ ನ್ಯಾಯಾಲಯದಲ್ಲಿ ದಸರೆಯ ನಂತರ ಬರಲಿದೆ ಎಂದು ಅವರು ಹೇಳಿದರು.
ಕಳೆದ ಜೂನ್ 10ರಂದು ಜಿಲ್ಲಾಧಿಕಾರಿಗಳೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆಯಡಿ ಆಳಂದ್ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಲಿಂಗಾಯತ ಸಮುದಾಯ ಭವನದ ಕುರಿತು ಕೆಲವರು ಸುಳ್ಳು ಆರೋಪಗಳಿಂದ ಟ್ರಸ್ಟ್ ಹಾಗೂ ಸರ್ಕಾರಿ ಅಧಿಕಾರಿಗಳ ಹೆಸರನ್ನು ತೇಜೋವಧೆ ಮಾಡುತ್ತಿರುವ ಕುರಿತು ತನಿಖಾ ವರದಿಯನ್ನು ಸಲ್ಲಿಸಿದ್ದರು ಎಂದು ಅವರು ಉಲ್ಲೇಖಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆಳಂದ್ ಲಿಂಗಾಯತ ಸಮುದಾಯ ಭವನಕ್ಕೆ ಸರ್ಕಾರದಿಂದ 100 ಲಕ್ಷ ರೂ.ಗಳು ಮಂಜೂರಾಗಿದ್ದು, ಮೊದಲ ಕಂತಾಗಿ 25 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯನ್ನು ಪ್ರಾರಂಭಿಸಿ ನಂತರ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರರು ತಾಂತ್ರಿಕ ಪ್ರಗತಿ ವರದಿಯನ್ನು ಹಾಗೂ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ ನಂತರ ಸರ್ಕಾರದಿಂದ ಬಿಡುಗಡೆಯಾದ 2ನೇ ಕಂತಿನ 50 ಲಕ್ಷ ರೂ.ಗಳನ್ನು ಸಂಸ್ಥೆಗೆ ನಿಯಾನುಸಾರ ಪರಿಶೀಲಿಸಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರವಾಗಲಿ ಸುಳ್ಳು ಮಾಹಿತಿಯನ್ನು ಸಲ್ಲಿಸಿ, ಸಂಸ್ಥೆಯವರು ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಹಾಗೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಜಿಲ್ಲಾಧಿಕಾರಿಗಳೇ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಶ್ರೀರಾಮಸೇನೆಯ ಗೌರವಾಧ್ಯಕ್ಷ ಸಿದ್ದಲಿಂಗ್ ಸ್ವಾಮೀಜಿ ಅವರು ಆಳಂದ್ ಲಿಂಗಾಯತ ಸಮುದಾಯ ಭವನದ ಅನುದಾನ ದುರುಪಯೋಗ ಆಗಿರುವ ಕುರಿತು ಸಲ್ಲಿಸಿದ ದೂರಿನ ಆಧಾರದ ಮೇಲೆ ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಜಿ. ಸಂಗಾ ಅವರ ವಿರುದ್ಧ 420 ಪ್ರಕರಣ ದಾಖಲಾಗಿತ್ತು. ಈ ಕುರಿತು ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ದಸರಾ ನಂತರ ಉಚ್ಛ ನ್ಯಾಯಾಲಯದಲ್ಲಿ ವಿವಾದದ ಕುರಿತು ವಿಚಾರಣೆಗೆ ಬರಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.