ಬಿವೈವಿರಿಂದ ಕುರುಡುಮಲೆ ಗಣಪತಿಗೆ ವಿಶೇಷ ಪೂಜೆ

ಕೋಲಾರ,ನ,೧೫- ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸಬೇಕೆಂದು ಕುರುಡುಮಲೆಯ ಗಣಪತಿಗೆ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷದ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ತಿಳಿಸಿದರು.
ನೂತನ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಮುಳಬಾಗಿಲು ತಾಲ್ಲೂಕಿನ ಪುರಾಣ ಪ್ರಸಿದ್ದ ಗಣಪತಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ದೇವಾಲಯದಿಂದ ಹೊರ ಬರುತ್ತಿದ್ದಂತೆ ಶುಭ ಸೂಚನೆಯಂತೆ ಮಳೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಆಂದ್ರದಲ್ಲಿ ಹೆಚ್ಚಿನ ಸಂಸದರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕೆಂದು ತಿಳಿಸಿದ ಅವರು, ದೇಶಕ್ಕೆ ಮೋದಿಯವರ ನಾಯಕತ್ವ ಅತ್ಯಗತ್ಯವಾಗಿದೆ ಎಂದರು.
ಮೋದಿ ಅವರು ಪ್ರಧಾನಿಯಯಾಗಬೇಕೆನ್ನುವ ನಿಟ್ಟಿನಲ್ಲಿ ಆ ಭಗವಂತ ಎಲ್ಲಾ ಶಕ್ತಿಯನ್ನ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಭಾರತ ಇಂದು ವಿಶ್ವಮಾನ್ಯವಾಗಲು ಮೋದಿಯವರ ಕಾರ್ಯಗಳೇ ಕಾರಣವಾಗಿದೆ, ಭಾರತ ಮತ್ತಷ್ಟು ಅಭಿವೃದ್ದಿಪಥದತ್ತ ಸಾಗಲು ಮೋದಿಯವರ ನಾಯಕತ್ವ ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇನ್ನೂ ಪಕ್ಷದ ಹಿರಿಯರಿದ್ದರೂ ಸಹ ನನಗೆ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನ ಹೈಕಮಾಂಡ್ ನೀಡಿದೆ, ಹೀಗಾಗಿ ಪಕ್ಷದಲ್ಲಿ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುವುದರ ಜತೆಗೆ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಗೆದ್ದುಕೊಳ್ಳಲು ಶ್ರಮಿಸುವುದಾಗಿ ತಿಳಿಸಿದರು.
ನನನಗೆ ಪಕ್ಷದ ಎಲ್ಲಾ ಹಿರಿಯರು ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ,ವಿಶ್ವಾಸವಿದೆ, ಬಿಜೆಪಿ ಸಿದ್ದಾಂತಗಳಿರುವ ಪಕ್ಷವಾಗಿದೆ, ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾಜೀ, ಪ್ರಧಾನಿ ಮೋದೀಜಿ, ಅಮಿತ್ ಶಾಜೀ, ಸಂತೋಷ್‌ಜಿ ಮತ್ತಿತರ ಅಗ್ರಗಣ್ಯರ ತೀರ್ಮಾನದಿಂದ ನನಗೆ ಈ ಹುದ್ದೆ ಸಿಕ್ಕಿದೆ, ಆದ್ದರಿಂದ ಪಕ್ಷದಲ್ಲಿ ಅಸಮಾಧಾನದ ಮಾತಿಲ್ಲ ಎಂದು ತಿಳಿಸಿ, ಅವರ ನಂಬಿಕೆಗೆ ಚ್ಯುತಿ ಬಾರದಂತೆ ಪಕ್ಷವನ್ನು ಮುನ್ನಡೆಸುವೆ ಎಂದರು.
ದೇಶವ್ಯಾಪಿ ಖ್ಯಾತಿ ಗಳಿಸಿರುವ ಮುಳಬಾಗಿಲು ದೋಸೆ ಸವಿದ ವಿಜಯೇಂದ್ರ ಅವರೊಂದಿಗೆ ಸಂಸದ ಎಸ್.ಮುನಿಸ್ವಾಮಿ, ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ,ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ಶಿಢ್ಲಘಟ್ಟ ರಾಜಣ್ಣ, ಮುಖಂಡರಾದ ಮುಳಬಾಗಿಲು ಸೀಗೆಹಳ್ಳಿ ಸುಂದರ್ ಜಿ.ಪಂ.ಮಾಜಿ ಅದ್ಯಕ್ಷ ಸಿ.ಎಸ್. ವೆಂPಟೇಶ್ ಸದಸ್ಯ ಮಹೇಶ್, ಮಾಜಿ ಸದಸ್ಯ ಎಸ್.ಪಿ.ಮುನಿವೆಂಕಟಪ್ಪ , ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್.ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಕೋಲಾರ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ, ಕೆ.ಯು.ಡಿ.ಎ. ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಓಂಶಕ್ತಿ ಚಲಪತಿ, ಬಿಜೆಪಿ ಪ್ರಧಾನಕಾರ್ಯದರ್ಶಿ ಕೃಷ್ಣಮೂರ್ತಿ, ಕೋಲಾರ ನಗರ ಅಧ್ಯಕ್ಷ ತಿಮ್ಮರಾಯಪ್ಪ ಬಿಜೆಪಿ ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಪೆಟ್ರೋಲ್ ಬಂಕ್ ಮಂಜುನಾಥ್ ಮತ್ತಿತರರಿದ್ದರು.