ಬಿಳಿಜೋಳ ಮಾಲ್ದಂಡಿ ಖರೀದಿ ಕಾಲಾವಧಿ ಮಾ.31ರ ವರೆಗೆ

ಬೀದರ.ಮಾ.23: ಜಿಲ್ಲೆಯ ರೈತರಿಂದ ಮುಂಗಾರು ಋತುವಿನ ಬೆಳೆಯಾದ ಎಫ್‍ಎಕ್ಯೂ ಗುಣಮಟ್ಟದ ಬಿಳಿಜೋಳ ಹೈಬ್ರಿಡ್ ರೂ. 2620 ಹಾಗೂ ಬಿಳಿಜೋಳ ಮಾಲ್ದಂಡಿ ರೂ. 2640-00 ಪ್ರತಿ ಕ್ವಿಂಟಾಲ್‍ಗೆ ಖರೀದಿಸಲು ಸರ್ಕಾರವು 2020-21ನೇ ಸಾಲಿಗೆ ಭಾರತ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅನುಮತಿ ನೀಡಿದೆ.
ರೈತರು ತಾವು ಬೆಳೆದ ಬಿಳಿಜೋಳವನ್ನು ಎಂಎಸ್‍ಪಿ ದರದಲ್ಲಿ ಸರ್ಕಾರದ ವತಿಯಿಂದ ಖರೀದಿಸಲು ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಅನುಕೂಲ ಮಾಡಲಾಗಿದೆ.
ಈ ಉತ್ಪನ್ನವನ್ನು ಮಾರಾಟ ಮಾಡಬಯಸುವ ರೈತರು 01-03-2021 ರಿಂದ 31-03-2021ರವರೆಗೆ ತಮಗೆ ಸಮೀಪ ಇರುವ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಬಹುದಾಗಿದೆ.
ನೋಂದಣಿ ಕಾರ್ಯದ ಜೊತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 01-03-2021 ರಿಂದ 31-03-2021ರ ವರೆಗೆ ಸರ್ಕಾರ ನಿಗಧಿಪಡಿಸಿದೆ. ಆದ್ದರಿಂದ ಜಿಲ್ಲೆಯ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಸರ್ಕಾರ ಘೋಷಣೆ ಮಾಡಿದ ಮುಂಗಾರು ಋತುವಿನ ಬೆಳೆಯಾದ ಬಿಳಿಜೋಳ (ಹೈಬ್ರಿಡ್ ಮತ್ತು ಮಾಲ್ದಂಡಿ) ಕನಿಷ್ಠ ಬೆಂಬಲ ಬೆಲೆಯ ಮಾರಾಟ ಮಾಡುವುದರ ಮೂಲಕ ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷರಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.