ಬಿಳಿಗಿರಿರಂಗನ ಬೆಟ್ಟದಲ್ಲಿ ಮೂರು ದಿನಗಳ ಹಕ್ಕಿ ಹಬ್ಬಕ್ಕೆ ಚಾಲನೆ

????????????????????????????????????

ಚಾಮರಾಜನಗರ, ಜ.06- ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿಯ ಸಹಯೋಗದಲ್ಲಿ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬಿಳಿಗಿರಿರಂಗನ ಬೆಟ್ಟದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕರ್ನಾಟಕದ 7ನೇ ಹಕ್ಕಿ ಹಬ್ಬಕ್ಕೆ ಚಾಲನೆ ದೊರೆಯಿತು.
ಬಿಳಿಗಿರಿ ರಂಗನಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹಕ್ಕಿಹಬ್ಬಕ್ಕೆ ಶಾಸಕರಾದ ಎನ್. ಮಹೇಶ್ ಅವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕರಾದ ಎನ್. ಮಹೇಶ್ ಅವರು, ಪೂರ್ವ ಪಶ್ಚಿಮ ಘಟ್ಟಗಳು ಸಂಧಿಸುವ ಬಿಳಿಗಿರಿರಂಗನ ಬೆಟ್ಟ ಭೂದೇವಿಯ ಮುಕುಟವಿದ್ದಂತೆ. ಇಂತಹ ಪ್ರಕೃತಿ ಮಡಿಲಲ್ಲಿ ರಾಜ್ಯ ಮಟ್ಟದ ಹಕ್ಕಿಹಬ್ಬ ಆಯೋಜಿಸಿರುವುದು ಅತ್ಯಂತ ಅರ್ಥ ಪೂರ್ಣವಾಗಿದೆ ಎಂದರು.
ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿ ಅವರು 1939ರಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ 100 ಪ್ರಭೇದ ಹಕ್ಕಿಗಳು ಇರುವ ಬಗ್ಗೆ ಗುರುತಿಸಿದ್ದರು. 2012ರ ನಂತರ ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯಲ್ಲಿ 282 ಹಕ್ಕಿಗಳ ಪ್ರಭೇದ ಇರುವ ಬಗ್ಗೆ ಗುರುತಿಸಲಾಗಿದೆ. ಪ್ರಸ್ತುತ 300ಕ್ಕೂ ಹೆಚ್ಚು ಹಕ್ಕಿಗಳ ಪ್ರಭೇದ ಇರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಹಕ್ಕಿ ಹಬ್ಬವು ಪಕ್ಷಿಗಳ ಸಂಖ್ಯೆಯನ್ನು ಗುರುತಿಸುವ ಇಲಾಖೆಯ ಮಹತ್ವದ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.
ಅರಣ್ಯ ವಾಸಿಗಳ ಸಹಕಾರ ಪಡೆದರೆ ಹಕ್ಕಿಗಳ ಬಗ್ಗೆ ಮತ್ತಷ್ಟು ವಿವರ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಹಕ್ಕಿ ಹಬ್ಬದಲ್ಲಿ ಭಾಗವಹಿಸಿರುವ ತಂಡಗಳು ಸ್ಥಳೀಯ ಅರಣ್ಯ ವಾಸಿಗಳ, ಸೋಲಿಗರ ನೆರವು ಪಡೆಯುವಂತಾಗಲಿ. ಎಲ್ಲರೂ ಸೇರಿ ಹಕ್ಕಿಹಬ್ಬವನ್ನು ಯಶಸ್ವಿಗೊಳಿಸಲೆಂದು ಶಾಸಕರಾದ ಎನ್. ಮಹೇಶ್ ಅವರು ಹಾರೈಸಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ಪರಿಸರ ಸಂರಕ್ಷಣೆ ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಮುಖ್ಯ ಹೊಣೆಗಾರಿಕೆಯಾಗಿದೆ. ಅಪರೂಪದ ಹಕ್ಕಿಗಳ ಗುರುತಿಸುವಿಕೆ ಹಾಗೂ ಅವುಗಳ ಉಳಿವಿಗೆ ಹಕ್ಕಿಹಬ್ಬ ನೆರವಾಗಲಿ ಎಂದು ಆಶಿಸಿದರು.
ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಅವರು ಮಾತನಾಡಿ ವಿವಿಧ ಜಾತಿಯ ಪಕ್ಷಿ ಸಂಕುಲಗಳ ಬಗ್ಗೆ ಜನರಲ್ಲಿ ಹೆಚ್ಚು ಸಂವೇದನಾ ಶೀಲಗೊಳಿಸುವ ಮೂಲಕ ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವ ಗುರಿ ಹಕ್ಕಿ ಹಬ್ಬದ್ದಾಗಿದೆ. ಅಳಿವಿನಂಚಿಲ್ಲಿರುವ ಪಕ್ಷಿಗಳ ಗುರುತಿಸಿ ಪೋಷಣೆ ಜಾಗೃತಿಗೆ ಹಕ್ಕಿ ಹಬ್ಬ ಅಗತ್ಯವಿದೆ. ಪಕ್ಷಿ ತಜ್ಞರು ವೀಕ್ಷಕರಿಗೆ ಹಕ್ಕಿಗಳ ಕುರಿತ ಸಮಗ್ರ ವಿಷಯ ವಿನಿಮಯ ವೇದಿಕೆ ಕಲ್ಪಿಸಲು ಹಕ್ಕಿಹಬ್ಬ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಾದ ಡಾ. ಸಂದೀಪ್ ದವೆ, ಚಾಮರಾಜನಗರ ಪ್ರಾದೇಶಿಕ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಕಾವೇರಿ ವನ್ಯಜೀವಿ ಧಾಮ ಅರಣ್ಯ ಅಧಿಕಾರಿ ಡಾ. ರಮೇಶ್, ಬಿ.ಆರ್.ಟಿ. ಹುಲಿ ಸಂರಕ್ಷಿತ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಡಾ. ಸಂತೋಷ್ ಕುಮಾರ್, ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರಾದ ಬಿ.ಆರ್. ರಮೇಶ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ನಟೇಶ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಏಡುಕುಂಡಲು ಮತ್ತಿತ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.