ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಮಹಾ ಸಂಪ್ರೋಕ್ಷಣೆ

ಚಾಮರಾಜನಗರ, ಮಾ.30- ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮದ ಅಂಗವಾಗಿ ಪೂಜಾ ವಿಧಿ ವಿಧಾನಗಳು ಇಂದು ಸಹ ಸಾಂಗವಾಗಿ ನೆರವೇರಿದವು.
ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಶಾಸಕ ಎನ್. ಮಹೇಶ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ಉಪಸ್ಥಿತಿಯಲ್ಲಿ ನಾನಾ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು.
ದೇವತಾ ಪ್ರಾರ್ಥನೆ, ವಿಷ್ಪಕ್ಷೇನಾರಾಧನೆ, ಪುಣ್ಯಾಹವಾಚನ, ಪಂಚಗವ್ಯಾರಾಧನ, ರಕ್ಷಾಬಂಧನ ಅಚವಾರ್ಯಋತ್ವಿಗ್ವರಣ, ಔಪಸನಾಗ್ನಿಕುಂಟೇಪು, ಅಗ್ನಿಪ್ರತಿಷ್ಠಾಪನಾ, ಯಾಗಾಶಾಲಾ ಶುಧ್ವ್ಯರ್ಥಂವಸ್ತು ಹೋಮ, ಪರ್ಯಗ್ನೀಕರಣ, ಪೌಂಡರೀಕಾಗ್ನೌ, ಅಗ್ನಿಪ್ರತಿಷ್ಠಾಪನಾ, ಅಕಲ್ಯಷಹೋಮ, ಮತ್ತಿತ್ತರ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು.
ಡಿಸಿ ಡಾ. ಎಂ.ಆರ್. ರವಿ ಹಾಗೂ ಶಾಸಕರಾದ ಎನ್. ಮಹೇಶ್ ಅವರು ದೇವಾಲಯಕ್ಕೆ ಭೇಟಿ ನೀಡಿ ಮಹಾಸಂಪ್ರೋಕ್ಷಣಾ ಅಂಗವಾಗಿ ನೆರವೇರಿಸಲಾಗುತ್ತಿರುವ ಪೂಜಾ ವಿಧಿ ವಿಧಾನ ಕಾರ್ಯಗಳಲ್ಲಿ ಪಾಲ್ಗೊಂಡರು. ದೇವಾಲಯದ ಆಗಮಿಕರು, ಅರ್ಚಕರ ವೃಂದಕ್ಕೆ ಧೀಕ್ಷಾ ವಸ್ತ್ರವನ್ನು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಿನ್ನಲೆಯಲ್ಲಿ ಸಂಪ್ರೋಕ್ಷಣಾ ಕಾರ್ಯಗಳ ಅಂಗವಾಗಿ ನಾನಾ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಈ ಕಾರ್ಯ ಅತ್ಯಂತ ಮಂಗಳ ತರುವಂತದ್ದು. ದೇವಾಲಯದ ಜೀರ್ಣೋದ್ದಾರ ಕಾರ್ಯದ ಹಿನ್ನೆಲೆಯಲ್ಲಿ ಭಕ್ತರಿಗೆ ರಂಗನಾಥನ ದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಸಂಪೂರ್ಣ ಪೂಜಾ ವಿಧಿವಿಧಾನಗಳ ಸಂಪ್ರೋಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕ ದರ್ಶನಕ್ಕೆ ಅವಕಾಶವಾಗಲಿದೆ ಎಂದರು.
ಹಿರಿಯರ ಮಾರ್ಗದರ್ಶನ ಹಾಗೂ ಆಗಮಿಕರ ನೇತೃತ್ವದಲ್ಲಿ ನೆರವೇರುತ್ತಿರುವ ಧಾರ್ಮಿಕ ಕೈಂಕರ್ಯ ಅತ್ಯಂತ ಯಶಸ್ವಿಯಾಗಿ, ಸಾಂಗವಾಗಿ ಹಾಗೂ ಬಿಳಿಗಿರಿರಂಗನ ಸಂತೃಪ್ತಿಗೆ ತಕ್ಕಹಾಗೆ ನಡೆಯಲಿದೆ. ಆ ಮೂಲಕವಾಗಿ ಇಡೀ ಚಾಮರಾಜನಗರ ಜಿಲ್ಲೆಯ ಜನರ ಸರ್ವಾಂಗೀಣ ಅಭಿವೃದ್ದಿ, ಸಮಸ್ತ ಬಂಧುಗಳ ಭಕ್ತರ ಬೆಳವಣಿಗೆ ಏಳಿಗೆಗೆ ಪ್ರಾರ್ಥಿಸೋಣ. ರಂಗನಾಥನ ಕ್ಷೇತ್ರ ಜಗತ್ಪ್ರಸಿದ್ದವಾಗಲಿ ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ದೇವಾಲಯದ ಜೀರ್ಣೋದ್ದಾರಕ್ಕೆ ಅನೇಕ ದಾನಿಗಳು ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಿದ್ದು ಇವರೆಲ್ಲನ್ನೂ ಕೃತಜ್ಞತೆಯಿಂದ ಸ್ಮರಿಸಬೇಕು. ಎಲ್ಲರಿಗೂ ಶ್ರೇಯಸ್ಸು, ಸಮೃದ್ದಿ ತರಲೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನುಡಿದರು.
ಪ್ರಧಾನ ಅರ್ಚಕರು ಹಾಗೂ ಆಗಮಿಕರಾದ ಎಸ್. ನಾಗರಾಜಭಟ್ಟರು, ರವಿಕುಮಾರ್, ಮೈಸೂರಿನ ಮಹಾರಾಜ ಸಂಸ್ಕøತ ಪಾಠಶಾಲೆಯ ವೈಖಾನಸಾಗಮ ಪ್ರಾಧ್ಯಾಪಕರಾದ ಡಾ. ಎಸ್. ಶ್ರೀನಿಧಿ, ಡಾ. ಎಸ್. ರಾಜಗೋಪಾಲ್, ಡಾ. ಪಿ. ಸತ್ಯನಾರಾಯಣ, ನಾಗೇಂದ್ರಭಟ್ ಅವರ ಇತರೆ ಪಂಡಿತರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಜಯಪ್ರಕಾಶ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಇತರರು ಹಾಜರಿದ್ದರು.