ಬಿಲ್ ಬಾಕಿ ಬಿಜೆಪಿ ಬೀದಿ ನಾಟಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,.೧೨:ಗುತ್ತಿಗೆದಾರರ ಬಿಲ್ ಬಾಕಿ ಸಂಬಂಧ ಬಿಜೆಪಿಯವರು ಬೀದಿ ನಾಟಕ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿಯವರು ತಮ್ಮ ಅವಧಿಯಲ್ಲಿ ನಡೆದಿದ್ದ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಉಳಿಸಕೊಂಡಿದ್ದೇಕೆ ಎಂದು ಉತ್ತರಿಸುತ್ತಿಲ್ಲ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಬಿಜೆಪಿಯವರು ಶೇ. ೪೦ರಷ್ಟು ಕಮಿಷನ್‌ಗಾಗಿ ಬಿಲ್‌ಪಾವತಿಯನ್ನು ತಡೆಹಿಡಿದಿದ್ದರೇ ಎಂದು ಪ್ರಶ್ನಿಸಿರುವ ಅವರು ಬಿಜೆಪಿ ಸರ್ಕಾರ ಯಾವ ಕಾರಣಕ್ಕಾಗಿ ಗುತ್ತಿಗೆದಾರರ ಬಿಲ್ ತಡೆದಿತ್ತು ಎಂಬುದನ್ನು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಬಿಜೆಪಿಯವರಂತೆ ಗುತ್ತಿಗೆದಾರರ ಬಳಿ ಒಂದೇ ಒಂದು ಪರ್ಸೆಂಟ್ ಕಮಿಷನ್ ಕೇಳಿಲ್ಲ. ಗುತ್ತಿಗೆದಾರರ ಸಂಘ ಕೂಡ ನಮ್ಮಮೇಲೆ ಕಮಿಷನ್ ಆರೋಪ ಹೊರಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿನಡೆಸದೆ ಬಿಲ್ ಪಡೆದ ಆರೋಪವಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಬಿಲ್ ಪಾವತಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುತ್ತಿಗೆ ಹಗರಣದ ತನಿಖೆಯಾಗಿ ಅದರ ವರದಿ ಬರುವವರೆಗೂ ಬಿಲ್‌ಹಣ ತಡೆಹಿಡಿಯುವುದು ಅನಿವಾರ್ಯ ನಿಯಮಾನುಸಾರ ಕಾಮಗಾರಿ ಮಾಡಿದ ಯಾವ ಗುತ್ತಿಗೆದಾರರು ಭಯಬೀಳುವ ಅವಶ್ಯಕತೆ ಇಲ್ಲ, ಯಾರು ಅಕ್ರಮವೆಸಗಿದ್ದಾರೋ ಅಂತಹವರ ವಿರುದ್ಧವಷ್ಟೇ ನಮ್ಮ ಕ್ರಮ.ಈ ತನಿಖೆಯಿಂದ ಬಿಜೆಪಿಯ ಕರ್ಮಕಾಂಡವು ಬಯಲಾಗಲಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದ್ದಾರೆ.