ಬಿಲ್ ಬಾಕಿ: ನ್ಯಾಯ ಒದಗಿಸಲು ಆಗ್ರಹ

ಲಕ್ಷ್ಮೇಶ್ವರ,ಜೂ 5: ತಾಲೂಕಿನಲ್ಲಿ ಟಿಎಪಿಸಿಎಂಎಸ್ ವತಿಯಿಂದ ಬೆಂಬಲ ಬೆಲೆಯಲ್ಲಿ ರೈತರಿಂದ ಜೋಳವನ್ನು ಖರೀದಿಸಲಾಗಿತ್ತು. ಎಪ್ರಿಲ್ ತಿಂಗಳಲ್ಲಿಯೇ ರೈತರು ಜೋಳವನ್ನು ಬೆಂಬಲ ಬೆಲೆಯಲ್ಲಿ ಸರ್ಕಾರಕ್ಕೆ ನೀಡಿದ್ದರು. ಆದರೆ ಈಗ 28 ರೈತರ ಸ್ಥಿತಿ ಅತಂತ್ರವಾಗಿದ್ದು 600 ಕ್ವಿಂಟಾಲ್ ಜೋಳದ ಬಿಲ್ ಬಾಕಿ ಬರಬೇಕಾಗಿತ್ತು.
ಆದರೆ ಈಗ ರೈತರ ಸ್ಥಿತಿ ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದ್ದು ಜೋಳವನ್ನು ವಾಪಸ್ಸು ತೆಗೆದುಕೊಂಡು ಹೋಗುವಂತೆ ರೈತರಿಗೆ ತಿಳಿಸಿದ್ದರಿಂದ ರೈತರು ತಾವು ಮಾಡದ ತಪ್ಪಿಗೆ ನಮಗೆ ಯಾಕೆ ಈ ಶಿಕ್ಷೆಯೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ನಿನ್ನೆ ರೈತರು ಉಗ್ರಾಣದ ಮುಂದೆ ಜಮಾಯಿಸಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರಲ್ಲದೇ ಯಾವುದೇ ಸಂದರ್ಭದಲ್ಲಿ ಜೋಳವನ್ನು ವಾಪಸ್ ತೆಗೆದುಕೊಂಡು ಹೋಗುವುದಿಲ್ಲ. ಅಧಿಕಾರಿಗಳು 28 ರೈತರ ಬಿಲ್ ಬಾಕಿ ಪಾವತಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಒತ್ತಾಯಿಸಿರುವ ರೈತರಾದ ನಿಂಗರಾಜ ಅಂಕಲಿ ಪಕೀರಪ್ಪ ಜಾವೂರ, ಉಮೇಶ್ ಹುಲಗೂರ, ಪ್ರವೀಣ್ ಕಾಳಪ್ಪನವರ, ಸುರೇಶ್ ಕಾಳಪ್ಪನವರ, ಜಿ.ಡಿ ಕಟಗಿ, ಎಸ್.ಎನ್. ಚಿಕ್ಕಣವರ ಮತ್ತಿತರರು ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.