ಬಿಲ್ ಗೇಟ್ಸ್ – ಮೆಲಿಂಡಾ ದಾಂಪತ್ಯ ಅಂತ್ಯ

ವಾಷಿಂಗ್ಟನ್, ಮೇ.೪- ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ವಿಶ್ವದ ಅತಿ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
೨೭ ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಇಬ್ಬರು ಸಮ್ಮತಿಯೊಂದಿಗೆ ಬೇರೆ ಬೇರೆಯಾಗಿ ಜೀವಿಸುವುದಾಗಿ ಎಂದು ಹೇಳಿದ್ದಾರೆ.ಆದರೆ, ೬೭ ವರ್ಷದ ಬಿಲ್ ಗೇಟ್ಸ್ ಮತ್ತು ೫೬ ವರ್ಷದ ಮೆಲಿಂಡಾ ಗೇಟ್ಸ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
೧೯೮೭ರಲ್ಲಿ ಮೆಲಿಂಡಾ ಪ್ರಾಡಕ್ಟ್ ಮ್ಯಾನೇಜರ್ ಆಗಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸೇರಿದ್ದರು. ಇವರಿಬ್ಬರು ಕಂಪನಿಯ ಕೆಲಸದಲ್ಲಿ ಜೊತೆಯಾಗಿ ತೊಡಗಿದ್ದ ಸಮಯದಲ್ಲಿ ಪ್ರೇಮ ಮೊಳೆದು ೧೯೯೪ರಲ್ಲಿ ವಿವಾಹವಾಗಿದ್ದರು.
ಆನಂತರ ಈ ಇಬ್ಬರು ಸೇರಿ ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಹೆಸರಿನಲ್ಲಿ ೨೦೦೦ನೇ ಸಾಲಿನಲ್ಲಿ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು. ಬಳಿಕ ದತ್ತಿ ನಿಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ೨೦೦೮ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದಿದ್ದರು. ಬಳಿಕ ಕಂಪನಿಯ ಮಂಡಳಿಯಿಂದಲೂ ಹೊರ ಬಂದು ನಂತರ ತಂತ್ರಜ್ಞಾನ ಸಲಹೆಗಾರನಾಗಿ ಮುಂದುವರಿಯುತ್ತಿರುವುದಾಗಿ ತಿಳಿಸಿದ್ದರು.
ವಿಶ್ವದ ಶ್ರೀಮಂತ ದಂಪತಿಗಳಲ್ಲಿ ಈ ಜೋಡಿಯು ಒಂದಾಗಿದೆ. ಇವರ ಜಂಟಿ ಸಂಪತ್ತನ್ನು ೧೩,೦೦೦ ಕೋಟಿ ಡಾಲರ್ ಇದೆ ಎಂದು ಅಂದಾಜಿಸಲಾಗಿದೆ. ಬಿಲ್ ಗೇಟ್ಸ್ ಅವರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ದಂಪತಿಗಳಿಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿ, ನಾವು ನಮ್ಮ ಸಂಬಂಧದ ಬಗ್ಗೆ ದೀರ್ಘವಾಗಿ ಚಿಂತನೆ ನಡೆಸಿದ ಬಳಿಕ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಕಳೆದ ೨೭ ವರ್ಷಗಳಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ವಿಶ್ವದ ಜನರು ಆರೋಗ್ಯಕರ ಜೀವನ ನಡೆಸಲು ನಾವು ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ.
ಈ ಸಂಸ್ಥೆಯ ಕೆಲಸದಲ್ಲಿ ನಾವು ಪೂರ್ಣವಾಗಿ ತೊಡಗಿಸಿಕೊಂಡು ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ನಮ್ಮ ಜೀವನದ ಈ ಮುಂದಿನ ಹಂತದಲ್ಲಿ ದಂಪತಿಯಾಗಿ ನಾವು ಒಟ್ಟಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ಜಂಟಿಯಾಗಿ ಹೇಳಿದ್ದಾರೆ.