ಬಿಲ್ಲವ, ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಆಗ್ರಹ


ಕಾರ್ಕಳ, ನ.೧- ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ೨೬ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಜ. ೬ರಂದು ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಿಂದ ಬೆಂಗಳೂರುವರೆಗೆ ೬೫೮ ಕಿ. ಮೀ. ದೂರದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ಶರಣ ಬಸವೇಶ್ವರ ಮಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಕಾರ್ಕಳದ ಪ್ರಕಾಶ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಪಾದಯಾತ್ರೆಗೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರು ಚಾಲನೆ ನೀಡಲಿದ್ದಾರೆ. ಬಳಿಕ ಪಾದಯಾತ್ರೆ ಉಡುಪಿ, ಬ್ರಹ್ಮಾವರ, ಮಾಸ್ತಿಕಟ್ಟೆ ಹೊಸನಗರವಾಗಿ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಚೆನ್ನಗಿರಿ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಸುಮಾರು ೩೫ ದಿನಗಳವರೆಗೆ ಈ ಪಾದಯಾತ್ರೆಯು ದಿನಕ್ಕೆ ೨೦ ಕಿ. ಮೀ. ನಂತೆ ಸಾಗಲಿದೆ. ಬಳಿಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ತಾನು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ. ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪಿಸಿ ೫೦೦ ಕೋಟಿ ರೂ. ಮೀಸಲಿಡಬೇಕು. ನಮ್ಮ ಸಮುದಾಯದ ಕುಲಕಸುಬು ಶೇಂದಿ ಇಳಿಸುವಿಕೆಗೆ ರಾಜ್ಯಾದ್ಯಂತ ಅವಕಾಶ ನೀಡಬೇಕು. ಬೇರೆ ರಾಜ್ಯಗಳಿಂದಲೂ ಶೇಂದಿ ತಂದು ಮಾರಾಟಕ್ಕೆ ಅವಕಾಶ ಮಾಡಬೇಕು. ಬಿಲ್ಲವ ಸಮುದಾಯ ಈಗ ೨ಎ ಮೀಸಲಾತಿ ಕೆಟಗರಿಯಲ್ಲಿದೆ. ಬೇರೆ ಸಮುದಾಯದವರಿಗೂ ೨ಎ ಕೆಟಗರಿಯನ್ನು ಸರಕಾರ ನೀಡುವುದಾದಲ್ಲಿ ಈಗ ಇರುವ ನಮ್ಮ ಮೀಸಲಾತಿಯನ್ನು ಹೆಚ್ಚಳ ಮಾಡಿಕೊಂಡು ಬೇಕಾದರೆ ನೀಡಲಿ. ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಲು ಬಿಲ್ಲವ, ಈಡಿಗ ಸೇರಿದಂತೆ ನಮ್ಮ ಸಮುದಾಯದವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಈ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್. ರಾಜು, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಚಂದ್ರಹಾಸ ಸುವರ್ಣ, ರಮೇಶ್ ಪೆರ್ಲ, ಜಿತೇಂದ್ರ ಸುವರ್ಣ, ಬಿಪಿನ್‌ಚಂದ್ರಪಾಲ್ ನಕ್ರೆ ಉಪಸ್ಥಿತರಿದ್ದರು.