`ಬಿಲ್ಲವರಿಗಾಗಿ ನಿಗಮದ ಅಗತ್ಯವಿದೆ’


ಮಂಗಳೂರು, ಸೆ.೧೯- ಬಿಲ್ಲವ ಸಮಾಜದ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಅಥವಾ ಮಂಡಳಿಯನ್ನು ರಚಿಸಬೇಕು ಎನ್ನುವ ಬೇಡಿಕೆಗೆ  ಸರಕಾರ ಭರವಸೆ ನೀಡಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್  ಕುದ್ರೋಳಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  
ರಾಜ್ಯದಲ್ಲಿ ವಿವಿಧ ಒಳ ಪಂಗಡಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವ ಸಮುದಾಯದಲ್ಲಿ ಶೈಕ್ಷಣಿಕ ವಾಗಿ, ಆರ್ಥಿಕ ವಾಗಿ ಹಿಂದುಳಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದುದರಿಂದ ಬಿಲ್ಲವರಿಗಾಗಿ ನಿಗಮದ ಅಗತ್ಯವಿದೆ. ೫೦೦  ಕೋಟಿ ರೂ. ಸರಕಾರ  ನೀಡಬೇಕು. ಬಿಲ್ಲವ ರನ್ನು ಹಿಂದುಳಿದ ವರ್ಗ ೨.ಎ ಯಿಂದ ಹಿಂದುಳಿದ ವರ್ಗ ೧ಕ್ಕೆ ಸೇರಿಸಲು ಸರ್ಕಾರಕ್ಕೆ ಸಲ್ಲಿಸಲಾದ ಬೇಡಿಕೆಯನ್ನು ಸರಕಾರ ಪರಿಗಣಿಸಿಲ್ಲ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸದೆ ಬಿಲ್ಲವ ಸಮುದಾಯಕ್ಕೆ ನೀಡಬೇಕಾದ ಮನ್ನಣೆ ನೀಡಿಲ್ಲ ಎಂದು ಸತ್ಯಜಿತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ನಾಗರಾಜ ಗುತ್ತಿಗೆದಾರ, ರಾಘವೇಂದ್ರ ಸುಂಟರ ಹಳ್ಳಿ, ಮೂಡಬಾ ರಾಘವೇಂದ್ರ, ಅಚ್ಚುತ ಅಮೀನ್, ಕೃಷ್ಣಮೂರ್ತಿ, ಸಲಹೆ ಗಾರರಾದ ಕೇಶವಮೂರ್ತಿ, ಉಮೇಶ್ ಉಪಸ್ಥಿತರಿದ್ದರು.