‘ಬಿಲ್ಡ್ ಟೆಕ್-2023’ ವಸ್ತು ಪ್ರದರ್ಶನಕ್ಕೆ ಚಾಲನೆ ಮೊದಲ ದಿನ ವ್ಯಾಪಕ ಪ್ರತಿಕ್ರಿಯೆ

ಬೀದರ್:ಜೂ.10: ಹೊಸದಾಗಿ ಮನೆ ಕಟ್ಟುವವರಿಗೆ ಅನುಕೂಲ ಮಾಡಿಕೊಡಲು ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಸಮೀಪದ ಝೀರಾ ಫಂಕ್ಷನ್ ಹಾಲ್‍ನಲ್ಲಿ ಹಮ್ಮಿಕೊಂಡಿರುವ ‘ಬಿಲ್ಡ್ ಟೆಕ್ 2023’ ಕಟ್ಟಡ ಸಾಮಗ್ರಿ, ಪೀಠೋಪಕರಣ ಹಾಗೂ ಗೃಹ ಅಲಂಕಾರ ವಸ್ತುಗಳ ಪ್ರದರ್ಶನಕ್ಕೆ ಮೊದಲ ದಿನವಾದ ಶುಕ್ರವಾರ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು.

ಮನೆ ನಿರ್ಮಾಣದ ಕನಸು ಹೊತ್ತವರು, ಈಗಾಗಲೇ ಕಟ್ಟಿದವರು ವಸ್ತು ಪ್ರದರ್ಶನದತ್ತ ಹೆಜ್ಜೆ ಹಾಕಿದರು.

ಸುಸಜ್ಜಿತ ಮಳಿಗೆಗಳಿಗೆ ಭೇಟಿ ಕೊಟ್ಟು, ಅತ್ಯಾಧುನಿಕ ಕಟ್ಟಡ ಸಾಮಗ್ರಿ, ಪೀಠೋಕರಣ, ಅಲಂಕಾರಿಕ ವಸ್ತು, ಎಲೆಕ್ಟ್ರಿಕ್ ಉಪಕರಣ, ಕೇಬಲ್, ಟ್ಯಾಪ್, ಬಣ್ಣ, ಪ್ಲೈವುಡ್, ಆರಾಮದಾಯಕ ಕುರ್ಚಿ, ಮಂಚ, ಎಲಿವೇಶನ್ಸ್, ಭಾರ ರಹಿತ ಇಟ್ಟಿಗೆ, ಮಳೆ ನೀರು ಕೊಯ್ಲು ಮೊದಲಾದ ಮಾಹಿತಿಗಳನ್ನು ಪಡೆದುಕೊಂಡರು. ಅನೇಕರು ಸ್ಥಳದಲ್ಲೇ ವಿವಿಧ ವಸ್ತುಗಳನ್ನು ಖರೀದಿಸಿದರು. ಕೆಲವರು ವಸ್ತುಗಳನ್ನು ‘ಬುಕ್’ ಕೂಡ ಮಾಡಿದರು.

ಮಧ್ಯಾಹ್ನದ ನಂತರ ಜನ ಭಾರಿ ಸಂಖ್ಯೆಯಲ್ಲಿ ಪ್ರದರ್ಶನಕ್ಕೆ ಹರಿದು ಬಂದರು. ವಿವಿಧ ಕಂಪನಿ, ಕಾರ್ಖಾನೆಗಳ ಪ್ರತಿನಿಧಿಗಳಿಂದ ಅಗತ್ಯ ಸಾಮಗ್ರಿಗಳ ಬಗೆಗೆ ಕೇಳಿ ತಿಳಿದುಕೊಂಡರು ಎಂದು ಯು.ಎಸ್. ಕಮ್ಯುನಿಕೇಷನ್ಸ್‍ನ ಉಮಾಪತಿ ಎಸ್.ಎಂ.ಕೆ. ತಿಳಿಸಿದರು.

ಮುಂಬೈ, ದೆಹಲಿ, ಬೆಂಗಳೂರು, ಚಂಡಿಗಢ್, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಯ ಕಂಪನಿಗಳ ಒಟ್ಟು 85 ಮಳಿಗೆಗಳು ಪ್ರದರ್ಶನದಲ್ಲಿ ಇವೆ. ಸ್ಟೀಲ್, ಸಿಮೆಂಟ್, ಟೈಲ್ಸ್, ರಿಯಲ್ ಎಸ್ಟೆಟ್, ಏರ್ ಕೂಲರ್, ತಿಂಡಿ ತಿನಿಸು, ಬಟ್ಟೆ, ಸ್ಟೆಷನರಿ ವಸ್ತುಗಳು ಮೊದಲಾದ ಮಳಿಗೆಗಳು ಇವೆ ಎಂದು ಹೇಳಿದರು.

ಅತ್ಯಾಧುನಿಕ ಗುಣಮಟ್ಟದೊಂದಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ನೆರವಾಗಲು ಪ್ರದರ್ಶನ ಏರ್ಪಡಿಸಲಾಗಿದೆ.

ಜಿಲ್ಲೆಯ ಜನ ವಸ್ತು ಪ್ರದರ್ಶನಕ್ಕೆ ಸ್ಪಂದಿಸಿದ್ದರಿಂದ ಖುಷಿಯಾಗಿದೆ ಎಂದು ಕ್ರೆಡೈ ಬೀದರ್ ಅಧ್ಯಕ್ಷ ರವಿ ಮೂಲಗೆ ತಿಳಿಸಿದರು.

ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಹಾಗೂ ಸುಂದರ ಮನೆಗಳು ನಿರ್ಮಾಣವಾಗಲಿ ಎನ್ನುವುದೇ ವಸ್ತು ಪ್ರದರ್ಶನದ ಆಶಯವಾಗಿದೆ. ಪ್ರದರ್ಶನ ಭಾನುವಾರದವರೆಗೂ ಇರಲಿದೆ. ಜಿಲ್ಲೆಯ ಜನ ಇದರ ಪ್ರಯೋಜನ ಪಡೆಯಬೇಕು ಎಂದು ಕ್ರೆಡೈ ಜಂಟಿ ಕಾರ್ಯದರ್ಶಿ ಹಾವಶೆಟ್ಟಿ ಪಾಟೀಲ ಹೇಳಿದರು.

ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಬಲಬೀರಸಿಂಗ್, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಶಂಕರರಾವ್ ಕೊಟ್ಟರಕಿ, ಬೀದರ್ ಕ್ರೆಡೈ ಅಧ್ಯಕ್ಷ ರವಿ ಮೂಲಗೆ, ಕಾರ್ಯದರ್ಶಿ ಅನಿಲಕುಮಾರ ಖೇಣಿ, ಜಂಟಿ ಕಾರ್ಯದರ್ಶಿ ಹಾವಶೆಟ್ಟಿ ಪಾಟೀಲ, ಯು.ಎಸ್. ಕಮ್ಯುನಿಕೇಷನ್ಸ್‍ನ ಉಮಾಪತಿ ಎಸ್.ಎಂ.ಕೆ., ಕಲ್ಮೇಶ, ಕ್ರೆಡೈ ಪದಾಧಿಕಾರಿಗಳಾದ ಚಂದ್ರಶೇಖರ ಪಾಟೀಲ (ಸಪ್ನಾ ಗ್ರುಪ್), ಸಚಿನ್ ಗೋಯಲ್, ಅಮಯ ಸಿಂದೋಲ್, ಎಂಜಿನಿಯರ್‍ಗಳ ಅಸೋಸಿಯೇಷನ್ ಸದಸ್ಯರಾದ ವೀರಶೆಟ್ಟಿ ಮಣಗೆ, ಕಾರ್ಯದರ್ಶಿ ದಿಲೀಪ್ ನಿಟ್ಟೂರೆ, ಖಜಾಂಚಿ ಓಂಕಾರ ಪಾಟೀಲ, ಅಂಬಾದಾಸ ಕುಲಕರ್ಣಿ, ಸಂದೀಪ್ ಕಾಡಾದೆ, ಪ್ರಶಾಂತ ಶೇಂದ್ರೆ, ಅಶೋಕ ಪಾಟೀಲ

ಮೊದಲಾದವರು ಇದ್ದರು.