‘ಬಿಲ್ಡ್ ಟೆಕ್- 2023’ ವಸ್ತು ಪ್ರದರ್ಶನಎರಡನೇ ದಿನವೂ ಉತ್ಸಾಹದಿಂದ ಪಾಲ್ಗೊಂಡ ಜನ

ಬೀದರ್: ಜೂ.11:ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಎದುರಿನ ಝೀರಾ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯುತ್ತಿರುವ ‘ಬಿಲ್ಡ್ ಟೆಕ್’ ವಸ್ತು ಪ್ರದರ್ಶನಕ್ಕೆ ಎರಡನೇ ದಿನವಾದ ಶನಿವಾರವೂ ಜನ ಉತ್ಸಾಹದಿಂದ ಭೇಟಿ ನೀಡಿದರು.

ಬಿಲ್ಡರ್‍ಗಳು, ಗುತ್ತಿಗೆದಾರರು, ಎಂಜಿನಿಯರ್‍ಗಳು, ಉದ್ಯಮಿಗಳು, ಮನೆ ಕಟ್ಟಿದವರು, ಹೊಸ ಮನೆ ನಿರ್ಮಾಣ, ನಿವೇಶನ ಖರೀದಿ, ಬ್ಯಾಂಕ್ ಸಾಲ ಬಯಸುವವರು ಪ್ರದರ್ಶನಕ್ಕೆ ಭೇಟಿ ಕೊಟ್ಟು, ಅತ್ಯಾಧುನಿಕ ಕಟ್ಟಡ ಸಾಮಗ್ರಿ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಮಾಹಿತಿ ಪಡೆದುಕೊಂಡರು.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರೂ ಭೇಟಿ ನೀಡಿ, ಪ್ರದರ್ಶನ ವೀಕ್ಷಿಸಿದರು.

ಬೀದರ್‍ನಲ್ಲಿ ದೊಡ್ಡ ಪ್ರಮಾಣದ ಪ್ರದರ್ಶನ ಏರ್ಪಡಿಸಿರುವುದು ಸಂತಸ ಉಂಟು ಮಾಡಿದೆ. ರಾಜ್ಯ ಹಾಗೂ ದೇಶದ ಪ್ರಮುಖ ನಗರಗಳ ಕಂಪನಿಗಳ ಪ್ರತಿನಿಧಿಗಳು ಉತ್ಪನ್ನಗಳೊಂದಿಗೆ ಪಾಲ್ಗೊಂಡಿದ್ದಾರೆ. ಮಳಿಗೆಗಳು ಸಾರ್ವಜನಿಕರಿಗೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

2006 ರಲ್ಲಿ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು. ಈ ಬಾರಿ ಬೃಹತ್ ಪ್ರಮಾಣದಲ್ಲಿ ಸಂಘಟಿಸಲಾಗಿದೆ. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೀದರ್ ಕ್ರೆಡೈ ಅಧ್ಯಕ್ಷ ರವಿ ಮೂಲಗೆ ತಿಳಿಸಿದರು.

ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಔರಾದ್, ಚಿಟಗುಪ್ಪ, ಕಮಲನಗರ, ಹುಲಸೂರು, ನೆರೆಯ ಕಲಬುರ್ಗಿ ಜಿಲ್ಲೆಯಿಂದಲೂ ಜನ ಪ್ರದರ್ಶನಕ್ಕೆ ಭೇಟಿ ಕೊಡುತ್ತಿದ್ದಾರೆ. ಸ್ಥಳದಲ್ಲೇ ಕಟ್ಟಡ ಸಾಮಗ್ರಿ ಬುಕ್ ಮಾಡುತ್ತಿದ್ದಾರೆ. ಬ್ಯಾಂಕ್ ಸಾಲಕ್ಕೂ ಅರ್ಜಿ ಸಲ್ಲಿಸುತ್ತಿದ್ದಾರೆ. ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡ ಸಾಮಗ್ರಿಗಳಿಗೆ ಸಂಬಂಧಿಸಿದ ಪ್ರದರ್ಶನಗಳು ನಡೆಯುತ್ತವೆ. ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಡಲು ಬೀದರ್‍ನಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ ಎಂದು ಕ್ರೆಡೈ ಜಂಟಿ ಕಾರ್ಯದರ್ಶಿ ಹಾವಶೆಟ್ಟಿ ಪಾಟೀಲ ತಿಳಿಸಿದರು.

ಕ್ರೆಡೈ ಬೀದರ್ ಹಾಗೂ ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ ಐಕಾನ್ ಸ್ಟೀಲ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾದ

ಪ್ರದರ್ಶನವು ಒಂದೇ ಸೂರಿನಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆಯುವ ಸದಾವಕಾಶ ಒದಗಿಸಿಕೊಟ್ಟಿದೆ. ಭಾನುವಾರ ಕೊನೆಯ ದಿನವಾಗಿದೆ. ಜಿಲ್ಲೆಯ ಜನ ಪ್ರದರ್ಶನದ ಲಾಭ ಪಡೆದುಕೊಳ್ಳಬೇಕು ಎಂದು ಯು.ಎಸ್. ಕಮ್ಯುನಿಕೇಷನ್ಸ್‍ನ ಉಮಾಪತಿ ಎಸ್.ಎಂ.ಕೆ ಹೇಳಿದರು.

ಬೀದರ್ ಕ್ರೆಡೈ ಕಾರ್ಯದರ್ಶಿ ಅನಿಲಕುಮಾರ ಖೇಣಿ, ಐಕಾನ್ ಸ್ಟೀಲ್ ತಾಂತ್ರಿಕ ಅಧಿಕಾರಿಗಳು ಇದ್ದರು.