ಬಿರ್ಸಾ ಮುಂಡಾ ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿ, ಬುಡಕಟ್ಟು ಹೀರೋ

ಕಲಬುರಗಿ:ಜೂ.9: ನಮ್ಮ ದೇಶದ ನೀರು, ನೆಲ, ಅರಣ್ಯ ಸೇರಿದಂತೆ ಎಲ್ಲಾ ಸಂಪತ್ತು ಭಾರತೀಯರಿಗೆ ಸೇರಿದ್ದು, ಇದನ್ನು ಯಾವುದೇ ಕಾರಣಕ್ಕೂ ಬ್ರಿಟಿಷರ್ ಸೊತ್ತಾಗಲು ಬಿಡುವುದಿಲ್ಲವೆಂದು ಬ್ರಿಟಿಷರ್ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿ, ಬುಡಕಟ್ಟು ಜನಾಂಗದ ಹೀರೋ ಬಿರ್ಸಾ ಮುಂಡಾ ಅವರ ಜೀವನ, ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಬಿರ್ಸಾ ಮುಂಡಾರ 124ನೇ ಸ್ಮರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮುಂಡಾ ಅವರು ವಿಶೇಷವಾಗಿ ಬುಡಕಟ್ಟು ಜನಾಂಗದ ಹಕ್ಕುಗಳು, ಬದುಕನ್ನು ಕಟ್ಟಿಕೊಡಲು ಹೋರಾಡುವ ಮೂಲಕ ‘ಆದಿವಾಸಿಗಳ ದೇವರು’ ಆಗಿದ್ದಾರೆ. ‘ಸರದಾರ ಆಂದೋಲನ’ದಲ್ಲಿ ಭಾಗವಹಿಸಿ ಬ್ರಿಟಿಷರೊಂದಿಗೆ ಪ್ರಬಲವಾಗಿ ಹೋರಾಡಿದರು. ಮಾರುವೇಷದಲ್ಲಿ ವಿವಿಧ ಪ್ರದೇಶಗಳಾದ ಬಸಿಯಾ, ಕೊಲೆಬಿರಾ, ಲೋಹರದಾಗ, ಬಾನೊ,ಕ್ರಾ, ಖೂಂಟಿ, ತಮಾಡ್, ಬುಂಡೋ, ಸೋನಾಹಾತು, ಸಿಂಹಭೂಮ್, ವೋಡಾಹಾಟ್ ತೆರಳಿ ಅಲ್ಲಿನ ಜನರಿಗೆ ಬ್ರಿಟಿಷರ್ ವಿರುದ್ದ ಹೋರಾಡಲು ಜಾಗೃತಿಗೊಳಿಸಿದರು. ಬ್ರಿಟಿಷರ ಬಹುಮಾನದ ಆಸೆಯಿಂದ ಮೂವರು ವ್ಯಕ್ತಿಗಳನ್ನು ಮುಂಡಾ ಅವರನ್ನು ಮೋಸದಿಂದ ಹಿಡಿದು, ಒಪ್ಪಿಸಿದರು. ನಂತರ ಬ್ರಿಟಿಷರ ಮುಂಡಾ ಅವರನ್ನು ರಾಂಚಿ ಜೈಲಿನಲ್ಲಿ ಬಂದಿಸಿಟ್ಟರು. ಅವರು ಅಲ್ಲಿಯೇ 1900ರ ಜೂನ್-9ರಂದು ಹುತಾತ್ಮರಾದರು. ಅವರು ಬದುಕಿದ್ದು ಕೇವಲ 25 ವರ್ಷಗಳು. ಇಂದಿಗೂ ಕೂಡಾ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಂಪ್ಯೂಟರ ಶಿಕ್ಷಕಿ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪ್ರಮುಖರಾದ ಮಲ್ಲಿಕಾರ್ಜುನ ಎಂ. ಅಭಿಷೇಕ ಎನ್.ವೈ. ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.