ಬಿರ್ಸಾಮುಂಡ ಬುಡಕಟ್ಟು ಜನಾಂಗದ ದನಿ

ಸಂಜೆವಾಣಿ ವಾರ್ತೆ
ಚಾಮರಾಜನಗರ: ನ.16:- ಅಪ್ರತಿಮ ದೇಶಪ್ರೇಮಿಯಾಗಿದ್ದ ಭಗವಾನ್ ಬಿರ್ಸಾಮುಂಡ ಅವರು ದೇಶದ ಎಲ್ಲಾ ಬುಡಕಟ್ಟು ಜನಾಂಗದ ದನಿಯಾಗಿದ್ದರು ಎಂದು ಯುವಜನ ಸೇವಾ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ. ನಾಗೇಂದ್ರ ಅವರು ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ?ಭಗವಾನ್ ಶ್ರೀ ಬಿರ್ಸಾಮುಂಡ ಜಯಂತಿ? ಹಾಗೂ ?ಜನಜಾತೀಯ ಗೌರವ್ ದಿವಸ್-2023? ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರು ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ಕಸಿದು ಶೋಷಣೆ ಮಾಡುತ್ತಿದ್ದುದನ್ನು ಬಾಲ್ಯದಿಂದಲೇ ಅರಿತಿದ್ದ ಬಿರ್ಸಾಮುಂಡ ಅವರು ಅದಿವಾಸಿ ಯುವಕರನ್ನು ಸಂಘಟಿಸಿ ಗೆರಿಲ್ಲಾ ಯುದ್ದದ ತರಬೇತಿ ನೀಡಿ ಬ್ರಿಟಿಷರೊಂದಿಗೆ ಯುದ್ಧ ಮಾಡಿ ಹಿಮ್ಮೆಟ್ಟಿಸಿದ್ದರು. ಉತ್ತಮ ನಾಯಕತ್ವ ಗುಣ ಹೊಂದಿದ್ದ ಬಿರ್ಸಾಮುಂಡ ಜೀವಂತವಿರುವವರೆಗೂ ಬ್ರಿಟಿಷರು ಅರಣ್ಯ ಪ್ರವೇಶಿಸದಂತೆ ತಡೆದು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು ಎಂದರು.
ರಾಜ್ಯಸರ್ಕಾರ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅದಿವಾಸಿ ಜನರಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಈ ಹಿಂದೆ 6 ತಿಂಗಳ ಅವಧಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರವನ್ನು ವರ್ಷಪೂರ್ತಿ ನೀಡಲು ಸರ್ಕಾರ ಮುಂದಾಗಿದೆ. ಅದಿವಾಸಿ ಜನರ ಜೊತೆ ಸರ್ಕಾರವಿದೆ. ಬುಡಕಟ್ಟು ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಆರೋಗ್ಯ ಹೊಂದಬೇಕು. ಸರ್ಕಾರದ ಸೌಲಭ್ಯಗಳನ್ನು ಅದಿವಾಸಿಗಳು ಸದ್ಭಳಕೆ ಮಾಡಿಕೊಂಡು ಅರ್ಥಿಕವಾಗಿ ಸದೃಢರಾಗಬೇಕು. ಬಿರ್ಸಾಮುಂಡ ಅವರ ಅದರ್ಶ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವರಾದ ನಾಗೇಂದ್ರ ಅವರು ತಿಳಿಸಿದರು.
ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ, ಕುಡುಗೋಲು-ಕಣರೋಗ ಕುರಿತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಬಿರ್ಸಾಮುಂಡ ಜಯಂತಿ ವಿಶೇಷವಾದ ಕಾರ್ಯಕ್ರಮವಾಗಿದ್ದು, ದೇಶಾದ್ಯಂತ ಆಚರಿಸಲಾಗುತ್ತಿದೆ. ಬಿರ್ಸಾಮುಂಡ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಸಾಮಾನ್ಯ ಬುಡಕಟ್ಟು ಜನಾಂಗಕ್ಕೆ ಬದುಕು ಕಟ್ಟಿಕೊಟ್ಟರು. ಅದಿವಾಸಿ ಜನರ ಏಳಿಗೆಗೆ ಹಾಗೂ ಒಳಿತಿಗೆ ಶ್ರಮಿಸಿದ ಮುಂಚೂಣಿ ನಾಯಕರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಅತಿಹೆಚ್ಚು ಬುಡಕಟ್ಟು ಸಮುದಾಯಗಳಿವೆ. ಇತ್ತಿಚೆಗೆ ಕಾಡಂಚಿನ ಹಾಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬುಡಕಟ್ಟು ಜನರ ಸಮಸ್ಯೆಗಳನ್ನು ಅರಿತಿದ್ದೇನೆ. ಅದಿವಾಸಿ ಜನರ ಪ್ರಗತಿಗಾಗಿ ಕಾರ್ಯಕ್ರಮಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿಗೊಳಿಸುತ್ತಿದೆ. ಅಗತ್ಯವಾಗಿರುವ ಮನೆಗಳನ್ನು ಹಂತಹಂತವಾಗಿ ನೀಡಲಾಗುವುದು. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಜನವನ ಸಾರಿಗೆ ವ್ಯವಸ್ಥೆಯನ್ನು ಮರುಚಾಲನೆಗೊಳಿಸಲಾಗಿದೆ ಎಂದು ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಬಿರ್ಸಾಮುಂಡ ಬುಡಕಟ್ಟು ಜನರ ಶಕ್ತಿಯಾಗಿದ್ದಾರೆ. ಅವರ ಹೋರಾಟ ಗುಣಗಳನ್ನು ಅದಿವಾಸಿಗಳು ಮೈಗೂಡಿಸಿಕೊಳ್ಳಬೇಕು. ನಗರ ಪ್ರದೇಶಗಳಿಂದ ಬಹಳ ದೂರವಿರುವ ಆದಿವಾಸಿ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅಭಿವೃದ್ಧಿಪರ ಯೋಜನೆಗಳನ್ನು ತಂದಿದೆ. ಬುಡಕಟ್ಟು ಜನರ ವಿಭಿನ್ನ ಕಲೆ, ಕ್ರೀಡೆ, ಸಂಸ್ಕøತಿ, ಪರಂಪರೆ ಭೂಮಿ ಇರುವವರೆಗೂ ಜೀವಂತವಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅದಿವಾಸಿ ಸಮುದಾಯ ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳಾಗಿದ್ದರೂ ಜನರು ಮೂಡನಂಬಿಕೆ, ಕಂದಾಚಾರಗಳಲ್ಲಿ ಸಿಲುಕಿದ್ದಾರೆ. ಪ್ರಮುಖವಾಗಿ ಬುಡಕಟ್ಟು ಜನಾಂಗ ಶೈಕ್ಷಣಿಕ ಅರಿವು ಪಡೆಯಬೇಕು. ಅದಿವಾಸಿಗಳಿಗೆ ಮೀಸಲಾಗಿರುವ ಸರ್ಕಾರದ ವಿಶೇಷ ಅನುದಾನ ದುರುಪಯೋಗವಾಗಬಾರದು. ದೇಶಾದ್ಯಂತ ಅದಿವಾಸಿಗಳ ಸಮಸ್ಯೆಗಳ ಕುರಿತು ಸಂಶೊಧನೆ ಮಾಡಿ ಸಮಾಜವನ್ನು ಮುನ್ನೆಲೆಗೆ ತರಬೇಕು ಎಂದರು.
ಹನೂರು ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಬಿರ್ಸಾಮುಂಡ ಹೆಸರೇ ರೋಮಾಂಚನಗೊಳಿಸುವಂತದ್ದು. ಅದಿವಾಸಿ ಜನರ ಹಕ್ಕುಗಳಿಗೆ ಹೋರಾಡಿದ ಬಿರ್ಸಾಮುಂಡ ಅವರ ಸ್ಮರಣೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಾಗಿದೆ. ಸರ್ಕಾರದ ಸೌಲಭ್ಯಗಳು ಅರ್ಹ ಅದಿವಾಸಿಗಳಿಗೆ ತಲುಪಲು ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಬೇಕು. ಅದಿವಾಸಿ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಬುಡಕಟ್ಟು ಜನರ ಬದುಕನ್ನು ಹಸನುಗೊಳಿಸಬೇಕು ಎಂದು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಯಳಂದೂರು ಬಿಳಿಗಿರಿರಂಗನಬೆಟ್ಟದ ಬುಡಕಟ್ಟು ಸಮುದಾಯದ ಮುಖಂಡರಾದ ಡಾ. ಸಿ. ಮಾದೇಗೌಡ ಅವರು ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡಿದ ಬಿರ್ಸಾಮುಂಡ ಅವರಿಗೆ ಗೌರವ ಸಲ್ಲಿಸಲು ಸರ್ಕಾರವು ಜನಜಾತೀಯ ಗೌರವ್ ದಿವಸ್ ಎಂದು ಘೋಷಣೆ ಮಾಡಿದೆ. ಹಿಂದೆ ತಾಲೂಕುಮಟ್ಟದಲ್ಲಿ ಆಚರಿಸಲಾಗುತ್ತಿದ್ದ ಬಿರ್ಸಾಮುಂಡ ಅವರ ಜಯಂತಿ ರಾಜ್ಯಮಟ್ಟದಲ್ಲಿ ಆಯೋಜನೆಯಾಗಿದೆ. ಇದು ಅದಿವಾಸಿ ಸಮುದಾಯಕ್ಕೆ ಸಿಕ್ಕ ಬಹುದೊಡ್ಡ ಗೌರವವಾಗಿದೆ ಎಂದ ಅವರು ಬಿರ್ಸಾಮುಂಡ ಅವರ ಬಾಲ್ಯಜೀವನ, ಹೋರಾಟದ ದಿನಗಳನ್ನು ಸವಿವರವಾಗಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಇದೇ ವೇಳೆ ಬುಡಕಟ್ಟು ಸಮುದಾಯದ ಒಳಿತಿಗೆ ಶ್ರಮಿಸಿ ಸಾಧನೆಗೈದ ಬೆಟ್ಟಕುರುಬ ಜನಾಂಗದ ರಮೇಶ, ನಾಟಿ ವೈದ್ಯರಾದ ಮಾದಮ್ಮ ಹಾಗೂ ಸೋಲಿಗ ಸಂಸ್ಕøತಿಗೆ ಕೊಡುಗೆ ನೀಡಿದ ಕೋಣೂರುಗೌಡ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿದ ಮಕ್ಕಳು ಕಾರ್ಯಕ್ರಮದಲ್ಲಿ ಗಮನ ಸೆಳೆದರು. ವೇದಿಕೆ ಮುಂಭಾಗದಲ್ಲಿ ಉತ್ತರಕನ್ನಡ ಜಿಲ್ಲೆಯ ಡೆಕ್ಕೆ ಕುಣಿತ ಹಾಗೂ ಸೋಲಿಗರ ಗೊರವರ ನೃತ್ಯ ಎಲ್ಲರ ಮನಸೂರೆಗೊಂಡಿತು.