ಬಿರುವೆರ್ ಕುಡ್ಲ ಮಹಿಳಾ ಘಟಕದಿಂದ ನೆರವಿನ ಹಸ್ತ

ಮಂಗಳೂರು, ಎ.೩೦- ನಗರದ ಮಠದ ಕಣಿ ಸಮೀಪದ ಸುಲ್ತಾನ್ ಬತ್ತೇರಿ ಬಳಿಯ ಪರಪು ಎಂಬಲ್ಲಿ ವಾಸಿಸುವ ಪರಿಶಿಷ್ಟ ಜಾತಿಯ ರವಿಯ ಕುಟುಂಬಕ್ಕೆ ನಗರದ ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ಮಹಿಳಾ ಘಟಕ ನೆರವಿನ ಹಸ್ತ ಚಾಚಿದೆ.

ಜನವಸತಿಯಿಲ್ಲದ ದುರ್ಗಮ ಪ್ರದೇಶದಲ್ಲಿ ಮುರಿದ ಹೆಂಚು, ಪ್ಲಾಸ್ಟಿಕ್ ಹೊದಿಸಿದ ಜೋಪಡಿಯಲ್ಲಿ ವಾಸವಾಗಿದ್ದ ರವಿ ಕಳೆದ ವರ್ಷ ಚಿಪ್ಪು ಹೆಕ್ಕಲು ನದಿಗೆ ಇಳಿದವರು ಮುಳುಗಿ ಮೃತಪಟ್ಟಿದ್ದರು. ಆ ಬಳಿಕ ಮಾನಸಿಕವಾಗಿ ಆಘಾತಕ್ಕೊಳಗಾದ ರವಿಯ ಹೆಂಡತಿ ತನ್ನಿಬ್ಬರು ಮಕ್ಕಳ ಜೊತೆ ದಿನದೂಡುತ್ತಿದ್ದಾರೆ. ಇವರಿಗೆ ಸರಕಾರದ ಯಾವುದೇ ಸವಲತ್ತು ಲಭಿಸಿಲ್ಲ. ವಿದ್ಯುತ್ ಸಂಪರ್ಕಕ್ಕೆ ಅಲೆದಾಡಿ ಸಾಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ ತಾಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಿರುವೆರ್ ಕುಡ್ಲದ ಮಹಿಳಾ ಘಟಕದ ಅಶೋಕ ನಗರ ಸಮಿತಿಯ ಮುಖಂಡರು, ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಮತ್ತಿತರರು ಬುಧವಾರ ಈ ಕುಟುಂಬಕ್ಕೆ ತಿಂಗಳಿಗೆ ಬೇಕಾಗುವಷ್ಟು ಪಡಿತರ ವಿತರಿಸಿದರು. ಈ ಸಂದರ್ಭ ಸಂಘಟಕಿಯರಾದ ವೀಣಾ, ಉಷಾ ಶೆಟ್ಟಿ, ಯಶೋಧಾ ಮತ್ತಿತರರು ಉಪಸ್ಥಿತರಿದ್ದರು.