ಬಿರುಗಾಳಿ ಸಹಿತ ಬಾರಿ ಮಳೆಗೆ ನೆಲಕಚ್ಚಿದ ಬಿನ್ಸ್

ಕೋಲಾರ,ಜೂ.೦೮:ಎರಡು ದಿನಗಳ ಹಿಂದೆ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ಬಿನ್ಸ್ ಬೆಳೆ ನೆಲಕಚ್ಚಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಚೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಆದಿಮೂರ್ತಿ ಎಂಬುವರು ಜಮೀನು ಲೀಸ್ಗೆ ಪಡೆದು ನಲವತ್ತು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಬಿನ್ಸ್ ಬೆಳೆ ಬೆಳೆದಿದ್ದರು. ಉಷ್ಣಾಂಶದಿಂದ ಬೆಳೆ ಹಾನಿ ತಪ್ಪಿಸಲು ಮೂರು ಎಕರೆಯಲ್ಲಿ ಪಾಲಿ ಹೌಸ್ ನಿರ್ಮಾಣಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತಿರುವ ಬಿನ್ಸ್ ಬೆಳೆಯಿಂದ ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆ ಗಾಳಿಯಿಂದಾಗಿ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ. ಸಂಪೂರ್ಣವಾಗಿ ಬೆಳೆ ನೆಲಕಚ್ಚಿದ್ದು ರೈತ ಆದಿಮೂರ್ತಿಗೆ ಅಘಾತವಾಗಿದೆ.
ರೈತ ಆದಿಮೂರ್ತಿ ಮಾತನಾಡಿ, ಸುಮಾರು ನಲವತ್ತು ಲಕ್ಷ ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು. ಎರಡು ದಿನದ ಹಿಂದೆ ಬಿರುಗಾಳಿ ಸಹಿತ ಸುರಿದ ಬಾರಿ ಮಳೆಗೆ ಪಾಲಿ ಹೌಸ್ ಧ್ವಂಸವಾಗಿ ಗಿಡದಲ್ಲಿ ಬಿಟ್ಟಿದ್ದ ಹುರುಳಿಕಾಯಿ ಸಂಪೂರ್ಣವಾಗಿ ನಾಶವಾಗಿವೆ. ಫಸಲು ಚೆನ್ನಾಗಿ ಬಂದಿದ್ದು ಇನ್ನೇನು ಕಾಯಿ ಕಿತ್ತು ಮಾರುಕಟ್ಟೆಗೆ ಹಾಕಬೇಕಾಗಿತ್ತು ಅಷ್ಟರಲ್ಲಿ ಅನಾಹುತ ನಡೆದಿದೆ. ಮಳೆಗಾಳಿಯಿಂದ ಬೆಳೆ ನಷ್ಟವಾಗಿದೆಯ ಆಥವಾ ಕಿಡಿಗೇಡಿಗಳು ಪಾಲಿ ಹೌಸ್‌ಗೆ ಕಟ್ಟಿದ್ದ ಕಂಬಿಗಳನ್ನು ಕಿತ್ತು ಹಾಕಿದರು ಗೊತ್ತಿಲ್ಲ, ಸಾಲ ಮಾಡಿ ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಬೆಳೆ ಮಾಡಿದ್ದೇವೆ ಈಗ ಬೆಳೆ ಹಾನಿಯಿಂದ ಧಿಕ್ಕು ತೋಚದಂತಗಿದೆ. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದವರು ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.