
ಬೆಂಗಳೂರು,ಏ.೧೪-ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಮತದಾರರನ್ನು ಬಿರಿಯಾನಿ ತಿನ್ನಲು ಬನ್ನಿ ಎಂದು ಆಹ್ವಾನಿಸಿದ್ದಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ವೇಳೆ ಜನರಿಗೆ ಊಟ ಮಾಡುವಂತೆ ಮನವಿ ಮಾಡಿದ್ದಕ್ಕಾಗಿ ಚುನಾವಣಾಧಿಕಾರಿಗಳು ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಚಿವ ಎಸ್‌ಟಿ ಸೋಮಶೇಖರ್ ವಿರುದ್ಧ ಜಾತ್ಯಾತೀತ ಜನತಾದಳ ಪಕ್ಷದ ದೂರಿನ ನಂತರ ಚುನಾವಣಾ ಆಯೋಗವು ಈ ಬಿರಿಯಾನಿ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬಿಜೆಪಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಕಳೆದ ಏ. ೯ರಂದು ಬೆಂಗಳೂರಿನ ಕೆಂಗೇರಿ ಹೋಬಳಿಯ ದೊಡ್ಡಿಪಾಳ್ಯದ ಕಬ್ಬಾಳಮ್ಮ ದೇವಸ್ಥಾನದ ಬಳಿ ಎಸ್‌ಟಿ ಸೋಮಶೇಖರ್ ಪ್ರಚಾರ ನಡೆಸುತ್ತಿದ್ದು, ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಣ ಮುಗಿಸಲು ಸಿದ್ಧವಾದಾಗ ಅವರ ಬೆಂಬಲಿಗರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದವರಿಗೆ ಊಟ ಸಿದ್ಧವಾಗಿದೆ ಎಂದು ಘೋಷಿಸುವಂತೆ ಮನವಿ ಮಾಡಿದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಬೆಂಬಲಿಗರ ಮನವಿಗೆ ಒಪ್ಪಿಕೊಂಡು, “ಈಗಾಗಲೇ ಊಟಕ್ಕೆ ತಡವಾಗಿದೆ ಮತ್ತು ಆಹಾರ ಸಿದ್ಧವಾಗಿದೆ. ಅದೂ ಬಿರಿಯಾನಿ. ದಯವಿಟ್ಟು ಎಲ್ಲರೂ ಊಟ ಮಾಡಿಕೊಂಡು ಹೋಗಿ” ಎಂದಿದ್ದರು. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಿರುವ ಕಾರಣ ಹೀಗೆ ಮತದಾರರಿಗೆ ಆಮೀಷ ಒಡ್ಡುವಂತಿಲ್ಲ.
ಸೋಮಶೇಖರ್ ಅವರು ಮತದಾರರಿಗೆ ಆಮಿಷ ಒಡ್ಡಿ ಬಿರಿಯಾನಿ ಔತಣ ನೀಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ಹೇಳಿಕೆಯ ವಿಡಿಯೋ ದೃಶ್ಯಾವಳಿ ಆಧರಿಸಿ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ದೃಶ್ಯಾವಳಿ ಆಧರಿಸಿ ಚುನಾವಣಾ ಕಣ್ಗಾವಲು ತಂಡದ ಅಧಿಕಾರಿ ಪ್ರಕಾಶ್ ಸಿಪಿ ಅವರು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದು, ಸೋಮಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮೇ.೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಾರ್ಚ್ ೨೯ ನೀತಿ ಸಂಹಿತೆ ಜಾರಿಯಾಗಿದೆ. ಆದರೂ, ಕೂಡ ಸಿವಿಜಿಲ್ ಆಯಪ್‌ನಲ್ಲಿ ಏಪ್ರಿಲ್ ೧೧ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ೪೬೦ ದೂರುಗಳು ದಾಖಲಾಗಿವೆ.
ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಂಗಳವಾರದವರೆಗೆ ೧,೦೧೮ ಎಫ್‌ಐಆರ್‌ಗಳು ದಾಖಲಾಗಿದ್ದು, ಮಾದಕ ದ್ರವ್ಯ, ಮದ್ಯ, ಅಮೂಲ್ಯ ಲೋಹಗಳು ಮತ್ತು ಇತರ ಉಡುಗೊರೆಗಳು ಸೇರಿದಂತೆ ೫೧ ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ೨೪ ಗಂಟೆಗಳ ಸಹಾಯವಾಣಿ ಸೇವೆಯನ್ನು ತೆರೆಯಲಾಗಿದೆ.