ಬಿಯರ್ ತುಂಬಿದ್ದ ಲಾರಿ ಪಲ್ಟಿ, ಬಾಟಲಿ ಇರುವ ಬಾಕ್ಸ್‌ಗಳನ್ನೇ ಹೊತ್ತೊಯ್ದ ಜನ!

ತರೀಕೆರೆ.ಏ.೨೨: ಕಿಂಗ್‌ ಫಿಷರ್‌ ಬಿಯರ್‌ ತುಂಬಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ ಎಂ.ಸಿ.ಹಳ್ಳಿ ಬಳಿ ಪಲ್ಟಿಯಾಗಿದ್ದು, ಜನರು ಕೊರೊನಾ ವೈರಸ್‌ನ ಭಯ ಬಿಟ್ಟು ಬಿಯರ್‌ ಬಾಟಲಿ ತೆಗೆದುಕೊಂಡು ಹೋಗಲು ಮುಗಿಬಿದ್ದ ಘಟನೆ ಸೋಮವಾರ ನಡೆದಿದೆ.
ನಂಜನಗೂಡಿನ ಡಿಸ್ಟಲರಿಯಿಂದ ಕಿಂಗ್‌ಫಿಷರ್‌ ಬಿಯರ್‌ ತುಂಬಿದ್ದ ಲಾರಿ ಬೆಳಗಾವಿಗೆ ತೆರಳಬೇಕಿತ್ತು. ಎಂ.ಸಿ.ಹಳ್ಳಿ ಚಾನಲ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಮರ ಲಾರಿ ಮೇಲೆ ಬಿದ್ದಿದೆ. ಚಾಲಕ ಲಾರಿಯಿಂದ ಹೊರಗೆ ಜಿಗಿದ ಕಾರಣ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
1150 ಬಾಕ್ಸ್‌ ಬಿಯರ್‌ ಬಾಟಲಿ ತುಂಬಿದ್ದ ಲಾರಿ ಮೇಲೆ ಮರ ಬಿದ್ದ ಪರಿಣಾಮ ಕೇವಲ 537 ಬಾಕ್ಸ್‌ಗಳು ಮಾತ್ರ ದೊರೆತಿದ್ದು, ಉಳಿದ ಬಾಕ್ಸ್‌ಗಳಲ್ಲಿ ಕೆಲವನ್ನು ಜನರು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಕೆಲವು ನಾಶವಾಗಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬಿಎಚ್‌ ರಸ್ತೆಯಲ್ಲಿ ಬಿಯರ್‌ ಸುಗ್ಗಿ..! ತರೀಕೆರೆ ಬಳಿ ಪಲ್ಟಿ ಹೊಡೆದ ಲಾರಿಯಿಂದ ‘ಎಣ್ಣೆ’ ಲೂಟಿ..!
ಎದ್ದುಬಿದ್ದು ಬಂದರು..!
ಬಿಯರ್‌ ತುಂಬಿದ ಲಾರಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೇ ಜನರು ಬಾಟಲಿ ಕೊಂಡೊಯ್ಯಲು ನಾಮುಂದು ತಾಮುಂದು ಎಂದು ಓಡೋಡಿ ಬಂದರು. ಒಬ್ಬರ ಮೇಲೊಬ್ಬರು ನುಗ್ಗಿ ಬಾಕ್ಸ್‌ಗಳನ್ನು ಸಂಭ್ರಮದಿಂದ ಹೊತ್ತೊಯ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿಒಂದಿಷ್ಟು ಬಾಕ್ಸ್‌ಗಳು ಹಲವರ ಮನೆ, ತೋಟದ ಮನೆ ಸೇರಿದ್ದವು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಬಕಾರಿ ಇಲಾಖೆ ಸಿಬ್ಬಂದಿ ಲಾರಿಗೆ ಮುಗಿಬಿದ್ದ ಜನರನ್ನು ಚದುರಿಸಲು ಹರಸಾಹಸಪಟ್ಟರು.