ಬಿಬಿಎಂಪಿ ವ್ಯವಸ್ಥಾಪಕ ಕೋವಿಡ್‌ಗೆ ಬಲಿ

ಬೆಂಗಳೂರು, ಏ.೨೯- ಬಿಬಿಎಂಪಿ ಕಸ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರ ಕಚೇರಿ ವ್ಯವಸ್ಥಾಪಕರಾಗಿದ್ದ ವಿಜಯನಗರದ ನಿವಾಸಿ ವಿನಾಯಕ (೪೧) ಅವರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.
ನಿನ್ನೆ ಈ ಘಟನೆ ನಡೆದಿದ್ದು, ೨೦೦೮ರಲ್ಲಿ ಬಿಬಿಎಂಪಿ ಸೇವೆಗೆ ಸೇರಿದ್ದ ವಿನಾಯಕ ಅವರು ಕಸ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿ ಕಚೇರಿಯಲ್ಲೂ ನಿಯೋಜನೆ ಮೇರೆಗೆ ಕೆಲ ಸಮಯ ಕರ್ತವ್ಯ ನಿರ್ವಹಿಸಿದ್ದರು.ಇತ್ತೀಚೆಗೆ
ಅವರಿಗೆ ಕೋವಿಡ್ ದೃಢಪಟ್ಟಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕಳೆದವಾರ ಆಸ್ಪತ್ರೆಗೆ ದಾಖಲಾಗಿದ್ದರು.
ವೆಂಟಿಲೇಟರ್ ಸೌಲಭ್ಯವಿದ್ದ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.