ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟಿಸಲು ಸುಪ್ರೀಂ ಸೂಚನೆ

ನವದೆಹಲಿ, ಜು.೨೮- ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಇನ್ನು ಒಂದು ವಾರದ ಒಳಗೆ ವಾರ್ಡ್ ಮೀಸಲಾತಿ ಘೋಷಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ವರದಿಯಾಗಿದೆ.
ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಇಂದು ಎಂಟು ವಾರಗಳ ಗಡುವು ಅಂತ್ಯವಾದ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಎ.ಎಂ.ಕಾನ್ವಿಲ್ಕರ್ ನೇತೃತ್ವದ ಪೀಠ ಇಂದು ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ವಾದ ಪ್ರತಿವಾದ ಆಲಿಸಿದ ಪೀಠ ಒಂದು ವಾರದ ಒಳಗೆ ವಾರ್ಡ್ ಮೀಸಲಾತಿ ಘೋಷಣೆ ಮಾಡಬೇಕು.ಅದೇ ರೀತಿಯಲ್ಲಿ, ಚುನಾವಣೆ ಆಯೋಗ ಕಾನೂನಿನ ಅನ್ವಯ ನಿರ್ದಿಷ್ಟ ಅವಧಿಯಲ್ಲಿಯೇ ಚುನಾವಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದೆ ಎಂದು ಮೂಲಗಳು ಹೇಳಿವೆ.ಇದಕ್ಕೂ ಮುನ್ನ ಸರ್ಕಾರದ ಪರ ವಿಷಯ ಪ್ರಸ್ತಾಪಿಸಿದ ಅಡ್ವೊಕೇಟ್ ಜನರಲ್, ವಾರ್ಡ್ ಮೀಸಲಾತಿ ಪ್ರಕ್ರಿಗೆ ಕಾಲಾವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ಆದರೆ,ಪೀಠ ನಿರಾಕರಿಸಿ, ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು. ಇನ್ನೂ, ಇದೇ ವೇಳೆಸಂಘ ಸಂಸ್ಥೆಗಳು ಸಲ್ಲಿಸಿರುವ ಪುನರ್ ವಾರ್ಡ್ ವಿಂಗಡಣೆ ಗೊಂದಲ ಕುರಿತ ವಾದವನ್ನು ಆಲಿಸಿತು.
ಎರಡು ದಿನಗಳ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನಂಬರ್ ೧೪ ಪಾಲಿಕೆ ಚುನಾವಣೆ ವಿಚಾರಣೆಯನ್ನು, ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್, ಅಭಯ್ ಎಸ್.ಓಕಾ ಮತ್ತು ಜೆ.ಪಿ. ಪರ್ದಿವಾಲ ಪೀಠವೂ ವಿಚಾರಣೆ ಕೈಗೆತ್ತಿಕೊಂಡಿತ್ತು. ಆದರೆ, ಸಾಲಿಸಿಟರ್ ಜನರಲ್ ಅನಾರೋಗ್ಯ ಹಿನ್ನೆಲೆ ಗೈರು ಆಗಿದ್ದ ಕಾರಣ ಇಂದು ವಿಚಾರಣೆ ಜರುಗಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಸದಸ್ಯರಾಗಿದ ಶಿವರಾಜ್, ಅಬ್ದುಲ್ ವಾಜೀದ್ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ವಾದವನ್ನು ವಿರೋಧಿಸಿ, ಶೀಘ್ರ ಚುನಾವಣೆಗೆ ಸೂಚನೆ ನೀಡಬೇಕು ಎಂದು ಅವರ ಮನವಿಯಾಗಿದೆ.