ಬಿಬಿಎಂಪಿ ವಾರ್ಡ್ ನೋಡಲ್ ಅಧಿಕಾರಿಗಳು ನಾಪತ್ತೆ! -ಮಹಮ್ಮದ್


ಬೆಂಗಳೂರು, ಡಿ.೨೯- ಬಿಬಿಎಂಪಿ ಸದಸ್ಯರ ಆಡಳಿತ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೇವೆಗಳನ್ನು ಒದಗಿಸಲು ವಾರ್ಡ್‌ವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದರೂ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸದೆ, ನಾಪತ್ತೆಯಾಗಿದ್ದಾರೆಯೇ ಎನ್ನುವ ಕೂಗು ಎದ್ದಿದೆ. ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡಿಗೆ ಒಬ್ಬರಂತೆ ನೋಡಲ್ ಅಧಿಕಾರಿ ಇದ್ದರೂ, ಕಸ, ರಸ್ತೆ ಗುಂಡಿಗಳು, ನೀರಿನ ಬವಣೆ ಹೀಗೆ ಹತ್ತಾರು ಸಮಸ್ಯೆಗಳು ದಿನನಿತ್ಯ ಕೇಳಿಬರುತ್ತಿದೆ.
ಆದರೆ, ಬೆರಳೆಣಿಕೆಯಷ್ಟು ವಾರ್ಡ್ ಗಳಲ್ಲಿ ಪಾತ್ರ ಪರಿಹಾರ ದಕ್ಕಿದರೆ, ಬಹುತೇಕ ಕಡೆ, ಸಾರ್ವಜನಿಕ ಸಮಸ್ಯೆ ಕೇಳುವಂತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.
ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಅಧಿಕವಾಗಿದೆ. ಜತೆಗೆ ರಸ್ತೆ ಗುಂಡಿಗಳು, ವಿವಿಧೆಡೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸಂಚಾರ ದಟ್ಟಣೆ, ಧೂಳು ಹಾಗೂ ಸ್ಥಳೀಯ ಬಿಬಿಎಂಪಿ ಆಸ್ಪತ್ರೆಗಳ ಬಗೆಗಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಧಿಕಾರಿಯೇ ಸಿಗುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಅಲ್ಲದೆ, ಚುನಾಯಿತ ಸದಸ್ಯರ ಅಧಿಕಾರಾವಧಿಯು ಇದೇ ವರ್ಷದ ಸೆ.೧೦ಕ್ಕೆ ಮುಕ್ತಾಯವಾಗಿತ್ತು. ಇದರಿಂದ ಪಾಲಿಕೆ ಮತ್ತು ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಲು ಕಷ್ಟಕರವಾಗಿದ್ದ ಕಾರಣದಿಂದ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೇವೆಗಳನ್ನು ಒದಗಿಸಲು ವಾರ್ಡ್‌ವಾರು ಸಮಿತಿಗಳನ್ನು ರಚಿಸಿ, ಪ್ರತಿ ವಾರ್ಡ್‌ಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ವಾರ್ಡ್ ವ್ಯಾಪ್ತಿ ಮತ್ತು ಸಮೀಪದಲ್ಲೇ ವಾಸವಿರುವ ಅಧಿಕಾರಿಗಳನ್ನು ನೇಮಕ ಮಾಡಿಯೂ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದರು.ಆದರೆ, ಅನೇಕ ವಾರ್ಡ್ ಗಳಲ್ಲಿ ಅಧಿಕಾರಿಯೂ ಜನರ ಕೈಗೆ ಸಿಗುವುದು ಕನಸಿನ ಮಾತಾಗಿದೆ.
ಸಮಿತಿ ಹೇಗೆ?:
ಸಾರ್ವಜನಿಕರ ಕುಂದು-ಕೊರತೆಗಳ ನಿವಾರಣೆಗಾಗಿ ವಾರ್ಡ್‌ನ ನೋಡಲ್ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಆಯಾ ವಾರ್ಡ್‌ನ ಸಹಾಯಕ, ಕಿರಿಯ ಇಂಜಿನಿಯರ್ ಸದಸ್ಯ ಕಾರ್ಯದರ್ಶಿಯಾಗಿದ್ದು, ಹಿರಿಯ ಅಥವಾ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಸ್ಥಳೀಯ ನಾಗರಿಕ ಕಲ್ಯಾಣ ಸಂಘದ ಪದಾಧಿಕಾರಿಗಳು ಸದಸ್ಯರಾಗಿರುತ್ತಾರೆ.
ಈ ಸಮಿತಿಯು ಪ್ರತಿ ತಿಂಗಳು ಒಂದನೇ ಮತ್ತು ಮೂರನೇ ಶನಿವಾರ ಸಭೆ ಸೇರಿ ವಾರ್ಡ್‌ನ ಸಮಸ್ಯೆಗಳ ಕುರಿತು ಚರ್ಚಿಸಿ, ನಡವಳಿಗಳನ್ನು ವಲಯ ವಿಶೇಷ ಆಯುಕ್ತರ ಮೂಲಕ ಆಯುಕ್ತರಿಗೆ ಸಲ್ಲಿಸಲಿಬೇಕು.
ಆದರೆ, ನಿರೀಕ್ಷೆ ಮಟ್ಟದಲ್ಲಿ ಇದು ನಡೆಯುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲು. ಸಮಿತಿ ಕೆಲಸಗಳೇನು?:
ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.
ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯ ನೀಡುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು.
ಕಸ ವಿಂಗಡಿಸಿಕೊಡದ ಮನೆಗಳು, ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಆ ಬಳಿಕವೂ ವಿಂಗಡಿಸಿಕೊಡದಿದ್ದರೆ ದಂಡ ವಿಧಿಸಲು ಕ್ರಮ ವಹಿಸಬೇಕು.
ಕಸ ಸಂಗ್ರಹಿಸಲು ಅಗತ್ಯ ಪೌರ ಕಾರ್ಮಿಕರು, ತಳ್ಳುವ ಗಾಡಿ ಮತ್ತು ಆಟೊ ಟಿಪ್ಪರ್‌ಗಳನ್ನು ಗುತ್ತಿಗೆದಾರರು ಒದಗಿಸಿರುವ ಬಗ್ಗೆ ಪರಿಶೀಲಿಸಬೇಕು.
ಒಣ ತ್ಯಾಜ್ಯ ಸಂಗ್ರಹಕ್ಕೆ ಭೇಟಿ ನೀಡಿ ಕಸ ಸಾಗಧಿಣೆಯಾಗುತ್ತಿರುವ ಕುರಿತು ಮತ್ತು ಖಾಲಿ ನಿವೇಶನಗಳಲ್ಲಿಕಸ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ರಸ್ತೆಗಳಲ್ಲಿಗುಂಡಿಗಳು ಬಿದ್ದಿದ್ದರೆ ಮುಚ್ಚಿಸಬೇಕು.
ಓಎಫ್‌ಸಿ ಕಂಪನಿಗಳು ಅಥವಾ ಇತರರು ಅನಧಿಕೃತವಾಗಿ ರಸ್ತೆಗಳನ್ನು ಅಗೆದಿದ್ದರೆ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಲು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಬೇಕು.
ವಾರ್ಡ್‌ಗಳಲ್ಲಿನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕು. ಎಲ್ಲಾ ಬಗೆಹರಿಸಲು ಕಷ್ಟಕರ..!
ಜನಪ್ರತಿನಿಧಿಗಳಷ್ಟು ವೇಗವಾಗಿ ನಾವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಉದಾಹರಣೆಗೆ ನಾವು ಪರಿಹಾರ ನೀಡಬೇಕಾದರೆ, ಸಾಕಷ್ಟು ಸಮಯ ಕಾಯಬೇಕು.ಆದರೆ, ಜನಪ್ರತಿನಿಧಿಗಳು ತಮ್ಮ ಕೈಯಿಂದಲೇ ಕ್ಷಣಮಾತ್ರದಲ್ಲಿ ಹಣ ಖರ್ಚು ಮಾಡುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ನೋಡಲ್ ಅಧಿಕಾರಿಯೊಬ್ಬರು ನುಡಿದರು.
ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳು ಅಳವಡಿಸಿದ್ದರೆ ತೆರವು ಮಾಡಿಸಬೇಕು
ತಿಂಗಳಿಗೊಮ್ಮೆ ಪಾಲಿಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ, ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಬೇಕು.
ಆಸ್ತಿ ತೆರಿಗೆ ವಸೂಲಾತಿ ಕುರಿತು ಪರಿಶೀಲಿಸಬೇಕು.
ಮಳೆಯಿಂದ ಪ್ರವಾಹ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಬೇಕು.
ರಸ್ತೆಗಳಲ್ಲಿನೀರು ನಿಲ್ಲದಂತೆ ಮತ್ತು ಚರಂಡಿಗಳಲ್ಲಿಸರಾಗವಾಗಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು.
ಜನಪ್ರತಿನಿಧಿಗಳನ್ನು ಭೇಟಿ ಮಾಡಿ ವಾರ್ಡ್‌ನ ಕುಂದು-ಕೊರತೆಗಳ ಬಗ್ಗೆ ಚರ್ಚಿಸಿ, ನಿವಾರಣೆಗೆ ಕ್ರಮ ಕೈಗೊಳ್ಳಬೇಕು.