ಬಿಬಿಎಂಪಿ ಮಾಜಿ ಸದಸ್ಯ ಆತ್ಮಹತ್ಯೆ

ಬೆಂಗಳೂರು, ನ.18- ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೂ ಆದ ಬಿಬಿಎಂಪಿ ಮಾಜಿ ಸದಸ್ಯ ಶಿವಪ್ಪ(51) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುರುವಾರ ಶಿವಪ್ಪ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗ ಮನೆಗೆ ಬಂದಾಗ ನೇಣು ಬಿಗಿದ ಸ್ಥಿತಿಯಲ್ಲಿ ತಂದೆಯನ್ನು ಕಂಡು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.ಆದರೆ ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ, 2005ರ ಅವಧಿಯಲ್ಲಿ ಅತ್ತಿಗುಪ್ಪೆ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಬಿಎಂಪಿ ಸದಸ್ಯರಾಗಿದ್ದ ಶಿವಪ್ಪ ಅವರು ಅತ್ತಿಗುಪ್ಪೆಯಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದರು.

ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಶಿವಪ್ಪ ನಂತರ ಕಾಂಗ್ರೆಸ್ ಸೇರಿ ಬಿಬಿಎಂಪಿ ಸದಸ್ಯರಾಗಿ ನಂತರ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ ಸೇರಿದ್ದರು. ಇನ್ನೂ, ಬಿಡಿಎ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಶಿವಪ್ಪ ಅವರ ಅಕಾಲಿಕ ನಿಧನಕ್ಕೆ ಸಚಿವ ಸೋಮಣ್ಣ,ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ ತೀವ್ರ ಸಂತಾಪ ಸೂಚಿಸಿದ್ದಾರೆ.