ಬಿಬಿಎಂಪಿ ಬೆಡ್ ಬ್ಲಾಕಿಂಗ್ ನ್ಯಾಯಾಂಗ ತನಿಖೆಗೆ ಸಿ.ಐ.ಟಿ.ಯು. ಒತ್ತಾಯ.

ದಾವಣಗೆರೆ.ಮೇ.೫; ಕೋವಿಡ್ ಬೆಡ್ಗಳನ್ನು ಬ್ಲಾಕಿಂಗ್ ಮಾಡಿ ದುಡ್ಡಿದ್ದವರಿಗೆ ಮಾರಿರುವ ಕುರಿತು ನ್ಯಾಯಾಂಗ ತನಿಖೆಗೆ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯುನಿಯನ್ಸ್ ಜಿಲ್ಲಾ ಸಂಚಾಲನ ಸಮಿತಿಯು ಒತ್ತಾಯಿಸುತ್ತದೆ.ರಾಜ್ಯ ಸಕಾ೯ರವು ಇಡೀ ಕೋವಿಡ್ ಸೋಂಕಿತರಿಗೆ ಬೆಡ್ ಒದಗಿಸುವಲ್ಲಿ, ಆಮ್ಲಜನಕ ನೀಡುವಲ್ಲಿ, ಐಸಿಯು, ವೆಂಟಿಲೇಟರ್, ರೆಮಿಡಿಸಿವಿರ್ ಔಷಧಿ ಒದಗಿಸುವಲ್ಲಿ ನಿರಂತರವಾಗಿ ಎಡವುತ್ತಾ ಬಂದಿದೆ. ಮೇ ಒಂದನೇ ತಾರೀಖಿನಿಂದ ಆರಂಭವಾಗ ಬೇಕಿದ್ದ 18 ವಷ೯ದ ಮೇಲಿನವರ ಲಸಿಕೀಕರಣವು ಲಸಿಕೆ ಕೊರತೆಯಿಂದ ಮುಂದೂಡಲ್ಪಟ್ಟಿದೆ. ಇದರ ಮುಂದುವರೆದ ಭಾಗವಾಗಿ ಇದೀಗ 4065 ಬೆಡ್ಗಳ ಬ್ಲಾಕಿಂಗ್ ದಂಧೆಯ ಹಗರಣ ಹೊರಬಿದ್ದಿದೆ. ಇದರ ಜೊತೆಯಲ್ಲೇ ಮನೆ ಆರೈಕೆಯಲ್ಲಿನ ರೋಗಿಗಳಿಗೆ ನೀಡಬೇಕಾದ ಮೆಡಿಕಲ್ ಕಿಟ್ಗಳನ್ನು ನೀಡದಿರುವ ವರದಿಗಳು ವ್ಯಾಪಕವಾಗಿವೆ. ಇಂತಹ ಹತ್ತಾರು ದೂರುಗಳಿವೆ ಆದ ಕಾರಣ ಒಟ್ಟಾರೆ ನ್ಯಾಯಾಂಗ ತನಿಖೆಗೆ ಸಕಾ೯ರ ಆದೇಶಿಸ ಬೇಕೆಂದು ಸಿ.ಐ.ಟಿ.ಯು. ಜಿಲ್ಲಾ ಸಂಚಾಲನ ಸಮಿತಿಯು ಕೋರಿದೆ. 
ಒಂದೊಂದು ವಲಯಕ್ಕೆ ಒಬೊಬ್ಬರು ಸಚಿವರಂತೆ ಅಷ್ಟದಿಕ್ಪಾಲಕರನ್ನು ನೇಮಿಸಿ ಅದರ ನಿವ೯ಹಣೆಯ ಉಸ್ತುವಾರಿಯನ್ನು ವಹಿಸಲಾಗಿದೆ. ಆದರೂ ಸಹಾ ಇಂತಹ ಬೆಡ್ ಬ್ಲಾಕಿಂಗ್ ಅವರ ಉಸ್ತುವಾರಿಯಲ್ಲೆ ನಡೆದಿದೆ ಎಂಬುದು ಸಕಾ೯ರವು ಆಡಳಿತದ ಮೇಲಿನ ಹಿಡಿತ ಕಳೆದುಕೊಂಡಿದೆ ಎಂಬುದನ್ನು ತೋರುತ್ತದೆ.  ಬಿಜೆಪಿ ಸಂಸದರು ಮತ್ತು ಕೆಲವು ಶಾಸಕರು ತಮ್ಮದೆ ಸಕಾ೯ರದ ವಿರುದ್ಧ ಮಾತನಾಡುತ್ತ ಅಷ್ಟದಿಕ್ಪಾಲಕ ಸಚಿವರು ಮತ್ತು ಬಿಬಿಎಂಪಿ ಕೋವಿಡ್ ಉಸ್ತುವಾರಿ ಸಚಿವರ ವಿರುದ್ಧವೇ ಬಂಡೆದ್ದಿರುವ ಸಂಕೇತಗಳಂತೆ ಕಂಡು ಬರುತ್ತಿದೆ. ಕೋವಿಡ್‌ ಸೋಂಕಿತರ ಸಾವು ನೂವುಗಳನ್ನ ತಡೆಯುವಲ್ಲಿ ವಿಫಲವಾಗಿರುವ ಸರ್ಕಾರವು ಈಗ ಜನರ ಆಕ್ರೋಶವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆಯನ್ನು ಮಾಡುತಿದ್ದು, ಬಿಜೆಪಿ ಒಳಜಗಳಕ್ಕೆ ಇದನ್ನು ಬಳಸಿಕೊಂಡು ಅಧಿಕಾರಿಗಳನ್ನು ಮಾತ್ರ ಹೊಣೆಯಾಗಿಸುವ ಇವರ ಯತ್ನಗಳಿಂದಾಗಿ ಒಟ್ಟಾರೆ ಜನತೆಯು ಬಲಿಯಾಗುತ್ತಿದ್ದಾರೆ ಎಂದು ಸಿ.ಐ,ಟಿ.ಯು.ಜಿಲ್ಲಾ ಸಂಚಾಲಕ ಆನಂದ ರಾಜು  ಆರೋಪಿಸಿದ್ದಾರೆ.