ಬಿಬಿಎಂಪಿ ಜನಸ್ನೇಹಿ ಬಜೆಟ್

ಬೆಂಗಳೂರು, ಮಾ.೨೭- ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ನಾಗರಿಕರಿಗೆ ಯಾವುದೇ ತೆರಿಗೆ ಹೊರೆ ಹೊರಿಸದೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಶಿಕ್ಷಣ, ಕುಡಿಯುವ ನೀರು, ರಸ್ತೆ, ಪಾರ್ಕ್, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಮೂಲ ಸೌಕರ್ಯ ಕಲ್ಪಿಸಲು ಗಮನ ಹರಿಸಿ ಪ್ರಸಕ್ತ ಸಾಲಿನ ೯೨೯೧,೩೩ ಕೋಟಿ ರೂ. ಗಾತ್ರದ ಬಿಬಿಎಂಪಿ ಬಜೆಟ್ ಇಂದು ಮಂಡಿಸಲಾಯಿತು.
ಆಯವ್ಯಯದಲ್ಲಿ ಎಲ್ಲಾ ವರ್ಗಗಳಿಗೆ, ವಲಯಗಳಿಗೆ ಹಾಗೂ ವಾರ್ಡ್‌ಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಪ್ರಮುಖವಾಗಿ ಬಿಬಿಎಂಪಿ ಕಾಯ್ದೆ ಅನ್ನು ಸರ್ಕಾರವು ಜಾರಿಗೆ ತಂದಿದ್ದು, ಪಾಲಿಕೆಯ ವಲಯಗಳು, ವಿಧಾನಸಭಾ ಕ್ಷೇತ್ರಗಳು ಮತ್ತು ವಾರ್ಡ್‌ಗಳಿಗೆ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರಗಳ ವಿಕೇಂದ್ರಿಕರಣಕ್ಕೆ ಆಯಾಮ ಒದಗಿಸಿದೆ.

ಪ್ರಸಕ್ತ ಸಾಲಿನಲ್ಲಿ ೨ ಸಾವಿರ ಕೋಟಿ ರೂ. ಅನುದಾನವನ್ನು ವಲಯಗಳಿಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿ, ಆಸ್ತಿ ತೆರಿಗೆ ಸಂಗ್ರಹದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಾರ್ಡ್‌ಗಳಲ್ಲಿ ಸಂಗ್ರಹಿಸಿದ ಆಸ್ತಿ ತೆರಿಗೆಯ ಶೇ.೧ ರಷ್ಟು ಅನುದಾನವನ್ನು ವಾರ್ಡ್ ಸಮಿತಿಗೆ ಅಗತ್ಯ ಉದ್ದೇಶಿಸಲಾಗಿದೆ.

ಬಿ ಖಾತೆಯಿಲ್ಲ
ಹಾಗೇ,ಕೆಲಸಗಳನ್ನು ನಿರ್ವಹಿಸುವ ಸಲುವಾಗಿ ನೀಡಲು ಈ ಆರ್ಥಿಕ ಸಾಲಿನಲ್ಲಿ, ಇ-ಆಸ್ತಿ ತಂತ್ರಾಂಶವನ್ನು ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳಿಗೆ ಜಾರಿಗೊಳಿಸಲು ನಿರ್ಧರಿಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ‘ಎ’ ಮತ್ತು ‘ಬಿ’ ಖಾತೆಗಳ ಗೊಂದಲಗಳಿದ್ದು, ಇದನ್ನು ತೊಡೆದು ಹಾಕಲು ಸರ್ಕಾರದ ಕಂದಾಯ ಇಲಾಖೆಯ ಸಹಕಾರದೊಂದಿಗೆ “ಬಿ” ವಹಿಯಲ್ಲಿ ಆಸ್ತಿಗಳ ದಾಖಲಿಸುವ ಪದ್ಧತಿಯನ್ನು ರದ್ದುಗೊಳಿಸಿ, ‘ಎ’ ಖಾತೆ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ.

ಕಸಕ್ಕೆ ಕಂಪನಿ:ನಗರದ ಘನತ್ಯಾಜ್ಯ ನಿರ್ವಹಣೆಯನ್ನು ಸ್ವತಂತ್ರವಾಗಿ ನಿರ್ವಹಿಸಲು, ಒಂದು ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಆ ಕಂಪನಿಯು ಇನ್ನು ಪ್ರಾರಂಭದ ಹಂತದಲ್ಲಿದ್ದು, ಪಾಲಿಕೆಯಿಂದ ಹಣಕಾಸಿನ ನೆರವು ಅಗತ್ಯವಿರುವುದರಿಂದ ಈ ಸಾಲಿನಲ್ಲಿ ೫೨೨ ಕೋಟಿ ರೂ.ಬಂಡವಾಳ ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟಾರೆ ೧೬೨೨.೩೩ ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ.

ಸಾರ್ವಜನಿಕ ಶೌಚಾಲಯಗಳನ್ನು ಓಡಿಎಫ್ ಮಾನದಂಡಗಳೊಂದಿಗೆ ನಿರ್ವಹಿಸಿ ಮತ್ತು ಹೊಸದಾಗಿ ೬೭ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಅದೇ ರೀತಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದಂದು ಪೌರ ಕಾರ್ಮಿಕರು ಹೆಚ್ಚು ಸಂಭ್ರಮದಿಂದ ಆಚರಿಸಲು ಪ್ರತಿ ಪೌರ ಕಾರ್ಮಿಕರಿಗೆ ನೇರ ಪಾವತಿ ಮುಖೇನ ೫ ಸಾವಿರ ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ.

ಸಾಮಾಜಿಕ ಕಲ್ಯಾಣ ಯೋಜನೆಗಳು
ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಇನ್ನು ಮುಂದೆ ಘೋಷಿಸಿವ ಯಾವುದೇ ಕಲ್ಯಾಣ ಕಾರ್ಯಕ್ರಮಗಳ ಮತ್ತು ಯೋಜನೆಗಳ ಅರ್ಜಿಗಳನ್ನು ಬೆಂಗಳೂರು ಒನ್ ಕೇಂದ್ರ ಮತ್ತು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಬಂಪರ್:ಪಾಲಿಕೆಯ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ ೮೫ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ
೨೫ ಸಾವಿರ ರೂ. ಹಾಗೂ ಶೇಕಡ ೬೦ರಷ್ಟು ವಿದ್ಯಾರ್ಥಿಗಳು ಶೇಕಡ ೮೫ರಷ್ಟುಕ್ಕಿಂತ ಅಧಿಕ ಅಂಕ ಪಡೆದ ಶಾಲೆಗಳ ಶಿಕ್ಷಕ ವೃಂದಕ್ಕೆ ೨ ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಬಿಬಿಎಂಪಿ ಪ್ರಕಟಿಸಿದೆ.

ನಗರದಲ್ಲಿಂದು ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ೯೨೯೧.೩೩ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ ಹಣಕಾಸು ವಿಭಾಗದ ಆಯುಕ್ತೆ ತುಳಸಿ ಮದ್ದಿನೇನಿ, ಕೋವಿಡ್-೧೯ ಸಂಕಷ್ಟದ ಸಂದರ್ಭದಲ್ಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ವರ್ಗಗಳ ಹಿತ ಕಾಪಾಡುವಂತಹ ಜನ ಸ್ನೇಹಿ ಬಜೆಟ್ ಇದಾಗಿದ್ದು,ಯಾರಿಗೂ ಹೊರೆಯಾಗಿಲ್ಲ.
ಜತೆಗೆ ಯಾವುದೇ ತೆರಿಗೆ ಹೆಚ್ಚಳವೂ ಇಲ್ಲ ಮತ್ತು ಹೊಸ ತೆರಿಗೆ ಪ್ರಸ್ತಾಪವೂ ಇಲ್ಲ ಎಂದು ಹೇಳಿದರು.

ಬಜೆಟ್ ಮುಖ್ಯಾಂಶಗಳು

 • ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನದಂದು ಪ್ರತಿ ಪೌರಕಾರ್ಮಿಕರ ಕೈಗೆ ೫ ಸಾವಿರ ರೂ.
 • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ಘೋಷಣೆ
 • ಕಸದ ರಾಶಿ ಕಂಡುಬಾರದ ವಾರ್ಡ್‌ಗೆ ೫೦ ಲಕ್ಷ ಪ್ರೋತ್ಸಾಹಧನ
 • ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ ೧೧೦ ಹಳ್ಳಿಗಳ ರಸ್ತರ ಅಭಿವೃದ್ಧಿಗೆ ೧೦೦೦ ಕೋಟಿ ಮೀಸಲು

*ವಲಯಗಳು, ವಿಧಾನಸಭಾ ಕ್ಷೇತ್ರ ಗಾಗೂ ವಾರ್ಡ್‌ಗಳ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ೨೦೦೦ ಕೋಟಿ ಹಂಚಿಕೆ ಮಾಡಲಾಗಿದೆ.

*ಆಸ್ತಿ ತೆರಿಗೆ ಸಂಗ್ರಹ ಉತ್ತೇಜನಕ್ಕೆ ಆಯಾ ವಾರ್ಡ್‌ನಲ್ಲಿ ಸಂಗ್ರಹವಾಗುವ ಶೇ ೧ರಷ್ಟು ಅನುದಾನ ಅದೇ ವಾರ್ಡ್‌ಗೆ ಮೀಸಲು

 • ಕೋವಿಡ್ ನಿಯಂತ್ರಣ ವೆಚ್ಚ ಭರಿಸಲು ಸರ್ಕಾರ ೩೦೦ ಕೋಟಿ ನೀಡಿದೆ.ಪಾಲಿಕೆ ೯೦ ಕೋಟಿ ಭರಿಸಿದೆ.
 • ಬೀದಿನಾಯಿ ಹಾವಳಿ ತಡೆಗೆ ೫ ಕೋಟಿ ಮೀಸಲು

*ಆಸ್ತಿಗೆ ಸಂಬಂಧಿಸಿ ಬಿ- ಖಾತಾ ನಿರ್ವಹಣೆ ರದ್ದು ಪಡಿಸಿ ಎ-ಖಾತಾ ಮಾತ್ರ ನಿರ್ವಹಿಸಲು ತೀರ್ಮಾನ

*ಒಂಟಿ ಮನೆ ಯೋಜನೆ ಹೊಸ ಫಲಾನುಭವಿ ಆಯ್ಕೆ ಇಲ್ಲ

 • ವೈದ್ಯಕೀಯ ವೆಚ್ಚ ಮರುಪಾವತಿಗೆ ೨೫ ಕೋಟಿ
 • ಪಾದಚಾರಿ ಮಾರ್ಗ ದುರಸ್ತಿಗೆ ಪ್ರತಿ ವಾರ್ಡ್‌ಗೆ ೨೦ ಲಕ್ಷ
 • ಉದ್ಯಾನ ನಿರ್ವಹಣೆಗೆ ಹಾಗೂ ಪರಿಸರ ನಿರ್ವಹಣೆಗೆ ೨೧೪ ಕೋಟಿ
 • ಅರಣ್ಯ ಇಲಾಖೆಗೆ ೩೯ ಕೋಟಿ
 • ಹಸಿರು ಸೂಚ್ಯಂಕ ಹೆಚ್ಚಳ ೧೦ ಲಕ್ಷ ಸಸಿ ನೆಡುವ ಗುರಿ
 • ರಾಜಕಾಲುವೆ ಹೂಳೆತ್ತಿ ನಿರ್ವಹಣೆಗೆ ೬೦ ಕೋಟಿ
 • ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳ ನಿರ್ವಹಣೆಗೆ ೩೧ ಕೋಟಿ
 • ಕೆರೆ ದತ್ತು ಯೋಜನೆ ಜಾರಿ
 • ೩೩೦ ಆಸನವಿರುವಂತೆ ಕೌನ್ಸಿಲ್ ಸಭಾಂಗಣ ಮೇಲ್ದರ್ಜೆಗೆ ಏರಿಸಲು ೧೦ ಕೋಟಿ
 • ಈ ವರ್ಷ ೧೦ ಸಾವಿರ ಬೀದಿ ದೀಪ ಅಳವಡಿಕೆ
 • ಆರ್ಥಿಕ ಸಂಕಷ್ಟ ಇರುವುದರಿಂದ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೆರೆ ವಿಭಾಗ ಹೊರತಾಗಿ ಬೇರಾವುದೇ ವಿಭಾಗಕ್ಕೆ ಹೊಸ ಕಾರ್ಯಕ್ರಮ ಇಲ್ಲ.
 • ಇ- ಆಸ್ತಿ ತಂತ್ರಾಂಶವನ್ನು ಎಲ್ಲ ವಾರ್ಡ್ ಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಪಾಲಿಕೆಯ ಸಮಸ್ಯೆಗಳನ್ನು ಕೇಳಿ, ಆಡಳಿತಾಧಿಕಾರಿ ನೀಡಿರುವ ಮಾರ್ಗದರ್ಶನ,ಸಲಹೆಗಳನ್ನು ಒಳಗೊಂಡು ಈ ಆಯವ್ಯಯ ಹೊರತರಲಾಗಿದೆ.

ಅಲ್ಲದೆ, ಬೆಂಗಳೂರು ನಾಗರೀಕರಿಗೆ ಜನನದಿಂದ ಹಿಡಿದು ಮರಣದವರೆಗೂ ಪಾಲಿಕೆಯೊಂದಿಗೆ ಸಂಬಂಧ ಇರುತ್ತೇ. ಮುಖ್ಯವಾಗಿ ನಾವು ಒಳ್ಳೆ ರಸ್ತೆ, ಪಾದಚಾರಿ ಮಾರ್ಗ, ನೀರು ಚರಂಡಿ ವ್ಯವಸ್ಥೆ, ಬೀದಿದೀಪಾ, ಕೆರೆ, ಪಾರ್ಕ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕೆನ್ನುವ ದೃಷ್ಟಿಯಿಂದ ವಾಸ್ತವಿಕ ಬಜೆಟ್ ಮಂಡಿಸಲಾಗಿದೆ.

-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

ಬಜೆಟ್ ಗಾತ್ರ ಎಷ್ಟು?

೨೦೨೧-೨೦೨೨ನೇ ಸಾಲಿನ ಬಿಬಿಎಂಪಿ ಬಜೆಟ್?ನಲ್ಲಿ ಸಿಬ್ಬಂದಿ ವೆಚ್ಚಗಳು ೧,೨೬೭.೭೫ ಕೋಟಿ ರೂಪಾಯಿ. ಆಡಳಿತ ವೆಚ್ಚ ೨೫೦.೩೭ ಕೋಟಿ ರೂಪಾಯಿ. ಬ್ಯಾಂಕ್ ಸಾಲ ಮತ್ತು ಬಡ್ಡಿ ಪಾವತಿ ೨೯೬.೮೭ ಕೋಟಿ. ಕಾರ್ಯಕ್ರಮಗಳ ವೆಚ್ಚ ೪೨೪.೨೫ ಕೋಟಿ ರೂಪಾಯಿ. ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ೨೧೧೫.೬೩ ಕೋಟಿ ರೂ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ ೪,೫೮೭.೬೮ ಕೋಟಿ. ಠೇವಣಿ ಮತ್ತು ಕರಗಳ ಮರುಪಾವತಿ ೩೪೪.೨೫ ಕೋಟಿ. ಒಟ್ಟು ೯,೨೯೧ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆಯಾಗಿದೆ.

ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತ…!

ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತಗೊಂಡಿದ್ದು, ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ೧೦ ಕೋಟಿ ಅನುದಾನ ನಿಗದಿ. ಆಸ್ತಿ ತೆರಿಗೆಯಿಂದ ೨,೮೦೦ ಕೋಟಿ ರೂಪಾಯಿ. ಕರಗಳಿಂದ ೩೫೦೦ ಕೋಟಿ ರೂ. ಸಂಗ್ರಹದ ನಿರೀಕ್ಷೆ. ಪ್ರಸಕ್ತ ವರ್ಷ ೩೮ ಕೋಟಿ ರೂ. ಬಾಡಿಗೆ ಸಂಗ್ರಹ ನಿರೀಕ್ಷೆ. ೧೧೬ ಮಾರುಕಟ್ಟೆ ಸಂಕೀರ್ಣ, ೫,೯೧೮ ಅಂಗಡಿಗಳ ಬಾಡಿಗೆಯಿಂದ ವರ್ಷಕ್ಕೆ ೨೩ ಕೋಟಿ ರೂ ಮಾತ್ರ ಬಾಡಿಗೆ ಸಂಗ್ರಹ ಆಗ್ತಿದೆ ಇದನ್ನು ಈ ವರ್ಷ ೩೮ ಕೋಟಿ ನಿರೀಕ್ಷೆ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್ ಕೈಹಿಡಿದ ಬಜೆಟ್..!

ಇಂದಿರಾ ಕ್ಯಾಂಟೀನ್ ಅನುದಾನ ಕುರಿತು ಬಜೆಟ್ ಪುಸ್ತಕದಲ್ಲಿ ಉಲ್ಲೇಖ ಇಲ್ಲದಿದ್ದರೂ ಈ ಬಗ್ಗೆ ಪ್ರತಿಕ್ರಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಇಂದಿರಾ ಕ್ಯಾಂಟೀನ್ ನಿರ್ವಹಣೆಗಳಿಗೆ ೮೦ ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಜತೆಗೆ ಓಎಫ್ ಸಿ ಕೇಬಲ್ ಅಳವಡಿಕೆಗಳಿಂದ ೧೦೫ ಕೋಟಿ ಸಂಗ್ರಹ ಗುರಿ ಹಾಕಲಾಗಿದೆ.
ಜಾಹಿರಾತು ಅಳವಡಿಕೆಗೆ ಸದ್ಯಕ್ಕೆ ಅವಕಾಶ ಇಲ್ಲ. ಇನ್ನು, ನಗರದಲ್ಲಿ ೪ ಲಕ್ಷ ೧೦ ಸಾವಿರ ಆಸ್ತಿಮಾಲೀಕರು ಆಸ್ತಿಗಳನ್ನು ತಪ್ಪಾಗಿ ಘೋಷಣೆ ಮಾಡಿಕೊಂಡಿದ್ದಾರೆ. ೭೮ ಸಾವಿರ ನೋಟೀಸುಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ನುಡಿದರು.

ಆಡಳಿತಾಧಿಕಾರಿ ಬಣ್ಣನೆ..!

ಹಿಂದಿನ ವರ್ಷ ಕೋವಿಡ್ ಮಹಾಮಾರಿಯಿಂದ ಪ್ರಪಂಚವು ಕಷ್ಟವನ್ನು ಅನುಭವಿಸಿದೆ. ಕೋವಿಡ್‌ನಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟಾಗಿರುವುದಲ್ಲದೆ, ಆರ್ಥಿಕ ವ್ಯವಸ್ಥೆಗೆ ಹಿನ್ನೆಡೆಯಾಗಿದ್ದು, ಸಾರ್ವಜನಿಕ ಕಾಮಗಾರಿಗಳನ್ನು ಸಹ ಸಕಾಲದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿ ರುವುದಿಲ್ಲ.

ಅತೀ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಇನ್ನೂ ಅತ್ಯುತ್ತಮ ನಾಗರೀಕ ಸೌಕರ್ಯಗಳನ್ನು ಒದಗಿಸಿ, ಅಗ್ರಗಣ್ಯ ನಗರವನ್ನಾಗಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಮಿಷನ್-೨೦೨೨ಕ್ಕೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಡಿಯಲ್ಲಿ ನಗರದ ಸುಗಮ ಸಂಚಾರ,ಉನ್ನತೀಕರಣ, ತ್ವರಿತವಾಗಿ ಸ್ಮಾರ್ಟ್ ರಸ್ತೆಗಳನ್ನು ಪೂರ್ಣಗೊಳಿಸುವುದು.

ಇನ್ನು, ನಗರದ ಹೃದಯ ಭಾಗದಲ್ಲಿರುವ ರಸ್ತೆಗಳನ್ನು ಮೇಲ್ದರ್ಜೆಗೆರಿಸಲು ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ೩೬ ರಸ್ತೆಗಳನ್ನು ಅಭಿವೃದ್ದಿಪಡಿಸಲು ಕೈಗೊಂಡಿದ್ದು, ಆದ್ಯತೆ ಮೇಲೆ ಈ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ೧೦ ರಸ್ತೆಗಳು ಪೂರ್ಣಗೊಂಡಿರುತ್ತದೆ. ಈ ಎಲ್ಲಾ ರಸ್ತೆಗಳ ಅಭಿವೃದ್ಧಿ ಪೂರ್ಣಗೊಂಡ ನಂತರ ನಗರದ ಹೃದಯ ಭಾಗದಲ್ಲಿರುವ ರಸ್ತೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದಾಗಿರುತ್ತದೆ.

ಅದೇ ರೀತಿ, ಮೆಟ್ರೋ ಮಾರ್ಗಗಳ ವಿಸ್ತರಣೆ,ವೈಜ್ಞಾನಿಕ ಮತ್ತು ದಕ್ಷ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಹಸಿರು ಬೆಂಗಳೂರನ್ನು ಸುರಕ್ಷಿತಗೊಳಿಸಲು ಬೃಹತ್ ವೃಕ್ಷ ಉದ್ಯಾನಗಳು,ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಉತ್ತಮವಾಗಿ ನಾಗರೀಕ ಸೇವೆಗಳನ್ನು ಜನಸಾಮನ್ಯರಿಗೆ ತಲುಪಿಸಲು ಸೇರಿದಂತೆ ಯೋಜನೆಗಳಿಗೆ ಆಧ್ಯತೆ ನೀಡಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಬಣ್ಣಿಸಿದರು.

ಎಫ್ ಕೆಸಿಸಿಐ ಮೆಚ್ಚುಗೆ..!

ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೨೦೨೧-೨೨ರ ಆಯವ್ಯಯವು ಮಹಾನಗರದ ಸಮಗ್ರ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರ ಹಿತಾಸಕ್ತಿಯನ್ನು ಕಾಪಾಡುವ ಜನಸ್ನೇಹಿ ಬಜೆಟ್.

ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ‘ಎ’ ಮತ್ತು ‘ಬಿ’ ಖಾತೆಯ ಗೊಂದಲಗಳನ್ನು ತೊಡೆದು ಹಾಕಿ ‘ಬಿ’ ಖಾತೆಯ ಆಸ್ತಿ ದಾಖಲೆ ಪದ್ದತಿ ರದ್ದುಗೊಳಿಸಿ ‘ಎ’ ಖಾತೆ ಮಾಡಲು ತೆಗೆದುಕೊಂಡಿರುವ ಕ್ರಮವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ವಾಗತಿಸುತ್ತಿದೆ. ಆದರೆ ನಾವು ಕೇಳಿರುವಂತೆ
ಒನ್ ಟೈಮ್ ಟ್ರೇಡ್ ಲೈಸನ್ಸ್ ಜಾರಿಗೆ ಮಾಡಿಲ್ಲ.

ಒಳ್ಳೆಯ ಬಜೆಟ್

೨೦೨೧-೨೨ ಸಾಲಿನ ಬೃಹತ್ ಬೆಂಗಳೂರು ಪಾಲಿಕೆಯ ಆಯವ್ಯಯದಲ್ಲಿ ಎಲ್ಲಾ ವರ್ಗಗಳಿಗೆ, ವಲಯಗಳಿಗೆ ಹಾಗೂ ವಾರ್ಡ್‌ಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಹಾಗೂ ಯಾವುದೇ ತೆರಿಗೆ ಹೆಚ್ಚಳ ಮತ್ತು ಹೊಸ ತೆರಿಗೆಯ ಪ್ರಸ್ತಾಪ ಇಲ್ಲದೆ ಸಮತೋಲನ ಕಾಯ್ದುಕೊಂಡು ಸಾಮಾಜಿಕ ನ್ಯಾಯ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

-ಗೌತಮ್ ಕುಮಾರ್, ಬಿಬಿಎಂಪಿ ಮಾಜಿ ಮೇಯರ್