ಬಿಬಿಎಂಪಿ ಚುನಾವಣೆ ಡಿ. 6 ರಂದು ನಿರ್ಧಾರ

ಬೆಂಗಳೂರು, ನ.೧೦- ಬೆಂಗಳೂರು ಆಡಳಿತದ ಕೇಂದ್ರ ಬಿಂದುವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಭವಿಷ್ಯ ಮುಂದಿನ ಡಿಸೆಂಬರ್ ೬ಕ್ಕೆ ನಿರ್ಧಾರವಾಗಲಿದೆ.
ಹಲವು ದಿನಗಳಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದ ಚುನಾವಣಾ ವಿಚಾರಣೆಯನ್ನು ಡಿ.೬ಕ್ಕೆ ನಡೆಸಿ ಅಂದೇ ದಿನಾಂಕ ನಿಗಪಡಿಸಿ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಚುನಾವಣೆ ನಡೆಸಲು ಮೀನಾಮೇಷ ಏಕೆ, ನಿಮ್ಮ ನಿರ್ಧಾರ ಏನೆಂದು ನಾಲ್ಕು ವಾರದೊಳಗೆ ತಿಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿತ್ತು.
ನ್ಯಾಯಪೀಠ ವಿಸಿದ್ದ ಗಡುವು ನ.೮ಕ್ಕೆ ಅಂತ್ಯಗೊಂಡಿತ್ತು. ಹೀಗಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪ್ರತಿವಾದಿಗಳಾದ ಎಂ.ಶಿವರಾಜ್, ಅಬ್ದುಲ್ ವಾಜೀದ್ ಅವರ ಪರ ವಕೀಲರಾದ ನಿಜಾಮ್ ಪಾಷಾ ಅವರು ಚುನಾವಣೆ ವಿಚಾರಣೆ ಆರಂಭಿಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳ ಗಮನ ಸೆಳೆದಿದ್ದರು.
ವಕೀಲರ ಮನವಿಗೆ ಸ್ಪಂದಿಸಿದ ಎನ್.ವಿ.ರಮಣ ಅವರು ನಿನ್ನೆ ಚುನಾವಣೆಗೆ ಸಂಬಂಧಪಟ್ಟ ಕಡತವನ್ನು ತಮ್ಮ ಕಚೇರಿಗೆ ತರಿಸಿಕೊಂಡು ಶೀಘ್ರ ವಿಚಾರಣೆ ನಡೆಸುವ ಭರವಸೆ ನೀಡಿದ್ದರು.
ವಕೀಲರಿಗೆ ನೀಡಿದ ಭರವಸೆಯಂತೆ ರಮಣ ಅವರು, ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯನ್ನು ಡಿ.೬ಕ್ಕೆ ನಿಗದಿಪಡಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಾಲ್ಕು ವಾರಗಳ ಗಡುವು ನೀಡುವ ಸಂದರ್ಭದಲ್ಲೇ ಮುಂದಿನ ವಿಚಾರಣೆ ಸಂದರ್ಭದಲ್ಲೇ ಅಂತೀಮ ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು.

ಇದೀಗ ಡಿ.೬ಕ್ಕೆ ಅರ್ಜಿ ವಿಚಾರಣೆ ನಡೆಯುತ್ತಿರುವುದರಿಂದ ಬಿಬಿಎಂಪಿ ಚುನಾವಣೆ ಭವಿಷ್ಯ ಅಂದೇ ನಿರ್ಧಾರವಾಗುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ.