ಬಿಬಿಎಂಪಿ ಚುನಾವಣೆಗೆ ಸಿದ್ಧತೆ

ಬೆಂಗಳೂರು, ಸೆ. ೨೦- ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು ಚುನಾವಣೆ ತಯಾರಿ ನಡೆದಿದೆ ಎಂದು ಐಟಿ,ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಭಾರತದ ಮುಂಚೂಣಿ ಎಲೆಕ್ಟ್ರಿಕ್ ವಾಹನಗಳ ತಯಾರಕ ಕಂಪೆನಿ ಅಲ್ಟಿಗ್ರೀನ್ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಆರಂಭಿಸಿರುವ ಪ್ರಥಮ ಇವಿ ವೆಹಿಕಲ್ಸ್ ರೀಟೈಲ್ ಮಾರಾಟ ಮಳಿಗೆಯಲ್ಲಿ ವಾಹನ ಚಲಾಯಿಸುವ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. ಬಿಬಿಎಂಪಿ ವಾರ್ಡ್ ಮೀಸಲಾತಿಯಲ್ಲಿ ಯಾವುದೇ ಗೊಂದಲವಿಲ್ಲ,ಎಲ್ಲಾ ಪಾರದರ್ಶಕವಾಗಿದ್ದು ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು,ಚುನಾವಣೆ ಎದುರಿಸಲು ಬಿಜೆಪಿ ಕಾರ್ಯತಂತ್ರ ಆರಂಭಿಸಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.
ಕರ್ನಾಟಕದಲ್ಲಿ ವಿದ್ಯುತ್ ಕೊರತೆಯೇ ಇಲ್ಲ,ಈಗಾಗಲೇ ಹಲವು ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವ ಮೂಲಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ರಾಜ್ಯವಾಗಿದ್ದು ಆರ್ಥಿಕ ಮತ್ತು ಆರೋಗ್ಯ ದೃಷ್ಟಿಯಿಂದ ವಿದ್ಯುತ್ ಚಾಲಿತ ವಾಹನಗಳ ಬಳಕೆ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರು.
ಪರಿಸರ ಕಾಳಜಿಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಅಗತ್ಯವಾಗಿದೆಯಲ್ಲದೆ ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಆಧಾರಿತ ವಾಹನಗಳ ಬಳಕೆ ಉತ್ತಮ,ಅಲ್ಲದೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಳಿತದಿಂದಾಗಿ ಆರ್ಥಿಕ ಸ್ಥಿರತೆ ಇಲ್ಲದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣ ಹೆಚ್ಚುತ್ತಿದೆ ಎಂದು ಅಶ್ವಥ್ ನಾರಾಯಣ್ ಅಭಿಪ್ರಾಯ ಪಟ್ಟರು.
ಅಲ್ಟಿಗ್ರೀನ್ ಕಂಪೆನಿ ಸಂಸ್ಥಾಪಕ ಹಾಗೂ ಸಿಇಒ ಡಾ.ಅಮಿತಾಭ್ ಸರನ್ ಮಾತನಾಡಿ ಸರಕು ಸಾಗಾಣೆ ವಾಹನಗಳನ್ನು ಪೂರೈಸುವುದು ಸಂಸ್ಥೆ ಮುಖ್ಯ ಗುರಿ.ನಾವು ಭಾರತೀಯ ಸರಕು ಮತ್ತು ಪ್ರಯಾಣಿಕರ ಚಲನಶೀಲತೆಯ ಅಗತ್ಯಗಳಿಗೆ ಸೂಕ್ತವಾದ ಅತ್ಯಾಧುನಿಕ ಇವಿ ಗಳನ್ನು ತಲುಪಿಸುವುದನ್ನು ಮುಂದುವರಿಸುತ್ತೇವೆ. ಮುಂದಿನ ೬ ತಿಂಗಳಲ್ಲಿ ದೇಶದ ಪ್ರಮುಖ ೪೦ ನಗರಗಳಲ್ಲಿ ಅಲ್ಟಿಗ್ರೀನ್ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ ಎಂದು ತಿಳಿಸಿದರು. ಅಲ್ಟಿಗ್ರೀನ್ ಕಂಪೆನಿ ಸಿಇಒ ಡಾ.ಅಮಿತಾಭ್ ಸರನ್,ಮ್ಯಾಗ್ನಮ್ ವೆಂಚರ್ಸ್ ಮಾಲೀಕ ಡಾ.ಎಂ ಪಿ ಶಾಮ್ ಉಪಸ್ಥಿತರಿದ್ದರು.