ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ

ಬೆಂಗಳೂರು, ಮೇ.14- ಬಿಬಿಎಂಪಿ ಕಸದ ಲಾರಿಯು ಮತ್ತೊಂದು ಬಲಿ ಪಡೆದಿದೆ. ಯಮ ಸ್ವರೂಪಿ ಲಾರಿ ಹರಿದ ಪರಿಣಾಮ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಥಣಿಸಂದ್ರ ರೈಲ್ವೇ ಮೇಲ್ಸೇತುವೆ ಬಳಿ ನಡೆದಿದೆ.
ದೇವಣ್ಣ (25) ನಾಗವಾರದಿಂದ ಹೆಗ್ಗಡೆ ನಗರದ ಕಡೆಗೆ ಬರುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸಂಬಂಧ ಆರೋಪಿ ಚಾಲಕ ದಿನೇಶ್ ನಾಯ್ಕ (40)ನನ್ನು ಬಂಧಿಸಿದ್ದು, ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ಚಿಕ್ಕಜಾಲಹಳ್ಳಿಯಲ್ಲಿ ನಡೆದಿರುವ 2ನೇ ಅಪಘಾತವಾಗಿದೆ. ಕಳೆದ ಮಾರ್ಚ್ 31ರಂದು ರಾಮಯ್ಯ (70) ಎಂಬ ವ್ಯಕ್ತಿಯನ್ನ ಬಿಬಿಎಂಪಿ ಲಾರಿ ಬಲಿ ಪಡೆದುಕೊಂಡಿತ್ತು. ಮತ್ತೆ ಅಂತಹದ್ದೇ ಘಟನೆ ಸಂಭವಿಸಿದ್ದು, ಬಿಬಿಎಂಪಿ ಕಸದ ಲಾರಿಗಳಿಗೆ ಇನ್ನೆಷ್ಟು ಬಲಿ ಬೇಕು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
2 ತಿಂಗಳಲ್ಲಿ 4 ಜೀವ ಬಲಿ:
ಕಳೆದ 2 ತಿಂಗಳಲ್ಲಿ ಬಿಬಿಪಿಎಂ ಕಸದ ಲಾರಿಗೆ 4 ಮಂದಿ ಬಲಿಯಾಗಿದ್ದಾರೆ. ಈ ಹಿಂದೆ ಮೂವರು ಕಸದ ಲಾರಿ ಅಪಘಾತದಲ್ಲೇ ಸಿಕ್ಕಿ ಪ್ರಾಣ ಬಿಟ್ಟಿದ್ರು. ಮಾರ್ಚ್ 21 ರಂದು ಹೆಬ್ಬಾಳದ ಬಳಿ ಅಕ್ಷಯ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಅಂಡರ್ ಪಾಸ್‌ನಲ್ಲಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯ ಮೃತಪಟ್ಟಿದ್ದಳು. ಈ ಸಂಬಂಧ ಆರ್‌ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ ನಂತರದಲ್ಲಿ ಮಾರ್ಚ್ 31 ರಂದು ಬಾಗಲೂರು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ರಾಮಯ್ಯ ಎಂಬ ವೃದ್ಧನ ಮೇಲೆ ಹರಿದು 2ನೇ ಬಲಿ ಪಡೆದುಕೊಂಡಿತ್ತು. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಲದೆಂಬಂತೆ ಏಪ್ರಿಲ್ 18 ರಂದು ನಾಯಂಡಹಳ್ಳಿ ಜಂಕ್ಷನ್ ಬಳಿ ಪದ್ಮಿನಿ ಎಂಬ ಎಸ್‌ಬಿಐ ಬ್ಯಾಂಕ್ ಉದ್ಯೋಗಿಯನ್ನು ಬಲಿ ಪಡೆದಿತ್ತು. ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 4ನೇ ಬಲಿ ಪಡೆದಿದ್ದರೂ ಬಿಬಿಎಂಪಿ ಬುದ್ದಿ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಲಾರಿ ಚಾಲಕರ ಅತಿಯಾದ ವೇಗ ಹಾಗೂ ಮದ್ಯ ಸೇವನೆ ಮಾಡಿ ವಾಹನ ಚಾಲಾಯಿಸಿದ್ದೆ ಘಟನೆಗೆ ಕಾರಣ ಎಂದು ಪೊಲೀಸ್ ತನಿಖೆ ವೇಳೆ ದೃಢಪಟ್ಟಿದೆ. ಆದರೆ ಬಿಬಿಎಂಪಿ ಮಾತ್ರ ಅದಕ್ಕೂ ನನಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದು, ಮತ್ತೊಬ್ಬ ಯುವಕನ ಬಲಿಗೆ ಪಾಲಿಕೆ ನೇರ ಕಾರಣವಾಗಿದೆ.