ಬಿಬಿಎಂಪಿ ಆಸ್ತಿ ತೆರಿಗೆ ‘೨,೭೫೩ ಕೋಟಿ ಸಂಗ್ರಹ


ಬೆಂಗಳೂರು, ಮಾ.೩೧-೨೦೨೦-೨೧ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವುದಕ್ಕೆ ಕೊನೆಯ ದಿನ ಮುಗಿದಿದ್ದು, ನಾಳೆಯಿಂದ ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಮಾಲೀಕರು ಶೇ.೨ರಷ್ಟು ದಂಡದೊಂದಿಗೆ ಪಾವತಿಸಬೇಕಾಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಎಸ್.ಬಸವರಾಜು, ಆರ್ಥಿಕ ವರ್ಷದ ತೆರಿಗೆ ಪಾವತಿ ಬುಧವಾರ ಕೊನೆಗೊಳ್ಳುತ್ತದೆ. ಕೋವಿಡ್‌ನಿಂದ ಉಂಟಾಗಿದ್ದ ಬಿಕ್ಕಟ್ಟಿನ ಹೊರತಾಗಿಯೂ ಈ ಬಾರಿ ಹೆಚ್ಚಿನ ಆಸ್ತಿ ಮಾಲೀಕರು ತೆರಿಗೆಯನ್ನು ಪಾವತಿಸಿದ್ದಾರೆ. ನಾನಾ ಕಾರಣಗಳಿಂದಾಗಿ ತೆರಿಗೆ ಪಾವತಿಸದೇ ಇದ್ದವರು ಇಂದು ತೆರಿಗೆ ಕಟ್ಟುವುದು ಒಳ್ಳೆಯದು.
ನಂತರ ದುಪ್ಪಟ್ಟು ದಂಡದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲ ತೆರಿಗೆ ಪಾವತಿ ವಿಳಂಬವಾದಂತೆಯೇ ತೆರಿಗೆಯ ಮೊತ್ತಕ್ಕೆ ಪ್ರತಿ ತಿಂಗಳಿಗೆ ಶೇ. ೨ ರಷ್ಟು ದಂಡನಾ ಶುಲ್ಕವನ್ನು ಸೇರಿಸಿ ಪಾವತಿಸಬೇಕಾಗುತ್ತದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಂದಿನ ಅಂಕಿ ಅಂಶಗಳ ಪ್ರಕಾರ ಒಟ್ಟು ೨,೭೫೩ ಕೋಟಿ ತೆರಿಗೆ ಸಂಗ್ರಹವಾಗಿದೆ. ಇನ್ನೂ ೯,೨೮೩ ಮಂದಿ ಚಲನ್ ಪಡೆದುಕೊಂಡಿದ್ದು, ಅದರಿಂದ ೬೪.೯೪ ಕೋಟಿ ತೆರಿಗೆ ಬರಲಿದೆ. ಅದಲ್ಲದೇ ೮೩೨ ಮಂದಿ ಚಲನ್ ಡೌನ್‌ಲೋಡ್ ಮಾಡಿದ್ದಾರೆ.
ಎಲ್ಲ ೨,೮೦೮ ಕೋಟಿ ಬಿಬಿಎಂಪಿ ಖಜಾನೆಗೆ ಸೇರಲಿದೆ. ಈಗಾಗಲೇ ಚಲನ್ ಡೌನ್‌ಲೋಡ್ ಮಾಡಿರುವ ಮೊತ್ತವೂ ಪಾವತಿಯಾದರೆ ತೆರಿಗೆ ಸಂಗ್ರಹ ಇನ್ನಷ್ಟು ಹೆಚ್ಚಳವಾಗಲಿದೆ. ತೆರಿಗೆ ಪಾವತಿಗೆ ಕೊನೆಯ ದಿನವಾದ ಗುರುವಾರ ೪೦ ಕೋಟಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ೧೮ ಲಕ್ಷ ಆಸ್ತಿಗಳಿದ್ದು, ಈ ಆಸ್ತಿಗಳಿಂದ ೨೦೨೦-೨೧ನೇ ಸಾಲಿನಲ್ಲಿ ೩,೫೦೦ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು.
ಆಸ್ತಿ ತೆರಿಗೆ ಸಂಗ್ರಹದ ವಾರ್ಷಿಕ ಗುರಿಗೆ ಹೋಲಿಸಿದರೆ ೬೫೦ ಕೋಟಿಗಳಷ್ಟು ತೆರಿಗೆ ಸಂಗ್ರಹ ಕಡಿಮೆ ಆಗಲಿದೆ. ಆದರೆ, ಇದರಲ್ಲಿ ಹಳೆ ಬಾಕಿಯೂ ಸೇರಿದೆ. ಒಟ್ಟು ೭.೪೪ ಲಕ್ಷ ಆಸ್ತಿ ಮಾಲೀಕರು ಹಿಂದಿನ ವರ್ಷಗಳ ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿದ್ದರು. ನ್ಯಾಯಾಲಯದ ಆದೇಶಗಳ ಮೂಲಕ ತೆರಿಗೆಯ ಭಾಗಶಃ ಮೊತ್ತ ಪಾವತಿ ಆಗಿರುವ ಪ್ರಮಾಣ ೫೫ ಕೋಟಿಗಳಷ್ಟಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಇನ್ನು, ಕಳೆದ ೨೦೧೯-೨೦ನೇ ಸಾಲಿನಲ್ಲಿ ೩,೫೦೦ ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆಗ ೨,೬೫೯ ಕೋಟಿ ಸಂಗ್ರಹಿಸುವ ಮೂಲಕ ಬಿಬಿಎಂಪಿ ದಾಖಲೆ ಸೃಷ್ಟಿಮಾಡಿತ್ತು.
ಆಫ್ ಲೈನ್ ಪಾವತಿ ಹೆಚ್ಚು: ಲಾಕ್‌ಡೌನ್ ಅವಧಿಯಲ್ಲಿ ಮೇ ತಿಂಗಳಾಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.೫ ರಿಯಾಯಿತಿ ನೀಡಲಾಗಿದ್ದು, ಈ ವೇಳೆ ಆನ್‌ಲೈನ್ ಮೂಲಕ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಿತ್ತು. ಕೋವಿಡ್ ಇಳಿಮುಖವಾದ ನಂತರ ಆಸ್ತಿ ತೆರಿಗೆ ವಸೂಲಿ ಅಭಿಯಾನ ಆರಂಭಿಸಿದ ನಂತರ ಚಲನ್ ಮೂಲಕ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗಿದೆ.
ಕೊರೊನಾ ಸೋಂಕಿನ ನಡುವೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಸುಸ್ತಿದಾರರಿಗೆ ನೋಟಿಸ್ ನೀಡಿ ಹೆಚ್ಚಿನ ತೆರಿಗೆ ಸಂಗ್ರಹಿಸಿದ್ದಾರೆ. ದಾಖಲೆ ಪ್ರಮಾಣದ ತೆರಿಗೆ ಸಂಗ್ರಹ ಸಂಪೂರ್ಣ ಕೀರ್ತಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಮತ್ತು ಅಧಿಕಾರಿ ಸಿಬ್ಬಂದಿಗೆ ಸಲ್ಲಬೇಕು ಎನ್ನುತ್ತಾರೆ ಪಾಲಿಕೆ ಹಿರಿಯ ಅಧಿಕಾರಿಗಳು.