ಬಿಬಿಎಂಪಿ ಆಯುಕ್ತರ ಎತ್ತಂಗಡಿ ನಿರೀಕ್ಷೆ

ಬೆಂಗಳೂರು, ಮೇ.೧೯- ರಾಜ್ಯದಲ್ಲಿ ಕಾಂಗ್ರೆಸ್ ನೂತನ ಸರ್ಕಾರ ರಚಿಸುತ್ತೀರುವ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ವರ್ಗಾವಣೆ ಪರ್ವ ಆರಂಭವಾಗಲಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರನ್ನು ಎತ್ತಗಂಡಿ ಮಾಡುವ ಸಾಧ್ಯತೆ ಇದೆ.
ನಾಳೆ ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಈ ನಡುವೆ ಯಾವುದೇ ಸರ್ಕಾರ ಕೂಡ ರಾಜ್ಯದಲ್ಲಿ ಇರುವ ಪ್ರಮುಖ ಅಯಾಕಟ್ಟಿನ ಸ್ಥಳದಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಎಲ್ಲಾ ಕಾಲಘಟ್ಟದಲ್ಲೂ ನಡೆಯುವ ಪ್ರಕ್ರಿಯೆಯಾಗಿದೆ.ಅದರಂತೆ ಈ ಬಾರಿ ಕೂಡ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಇಲ್ಲವೇ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ನಿಚ್ಚಳವಾಗಿದೆ. ಈ ನಡುವೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕೂಡ ಎತ್ತಂಗಡಿ ಮಾಡುವ ಸಾಧ್ಯತೆ ದಟ್ಟವಾಗಿದೆ.ಇನ್ನೂ, ಮತದಾರರ ದತ್ತಾಂಶ ಸಂಗ್ರಹಕ್ಕೆ ‘ಚಿಲುಮೆ’ ಸಂಸ್ಥೆಗೆ ಅವಕಾಶ ನೀಡಿರುವ ಬಗ್ಗೆ ಕೂಡ ತುಷಾರ್ ಗಿರಿನಾಥ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ ಮಾಡಿತ್ತು.ಇನ್ನೂ, ಇತ್ತೀಚೆಗೆ ಕಾಂಗ್ರೆಸ್ ನಾಯಕ ರಮೇಶ್ ಬಾಬು ಸಹ ತುಷಾರ್ ಗಿರಿನಾಥ್ ಅವಧಿಯಲ್ಲಿನ ಅಕ್ರಮಗಳ ಕುರಿತು ವಿಶೇಷ ತನಿಖೆ ನಡೆಯಲಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.ಇವೆಲ್ಲವೂ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾಗಿ ಮುಂದುವರೆಯುವುದು ಅನುಮಾನವಾಗಿದೆ.