ಬಿಬಿಎಂಪಿ ಆಡಳಿತ ಚುರುಕು: ಗೌರವ್

ಬೆಂಗಳೂರು, ಏ.೧- ಬಿಬಿಎಂಯ ನೂತನ ಹಾಗೂ ಮೊಟ್ಟ ಮೊದಲ ಮುಖ್ಯ ಆಯುಕ್ತರಾಗಿ ಗೌರವ್ ಗುಪ್ತ, ಆಡಳಿತಾಧಿಕಾರಿಯಾಗಿ ರಾಕೇಶ್ ಸಿಂಗ್ ಅಧಿಕೃತವಾಗಿ ಗುರುವಾರ ಅಧಿಕಾರ ಸ್ವೀಕರ ಮಾಡಿದ್ದು, ಈ ಉಭಯ ಅಧಿಕಾರಿಗಳಿಂದ, ಬಿಬಿಎಂಪಿ ಆಡಳಿತ ಯಂತ್ರ ಮತ್ತಷ್ಟು ವೇಗ ಪಡೆಯಲಿದೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗೌರವ್ ಗುಪ್ತಾ ಅವರಿಗೆ ನಿರ್ಗಮಿತ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಅಧಿಕಾರ ದಂಡ ಹಸ್ತಾಂತರಿಸಿದರು. ಬಳಿಕ ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆಯಲ್ಲಿದ್ದ ಗೌರವ್ ಗುಪ್ತಾ ಅವರು ಅಲ್ಲಿನ ಅಧಿಕಾರವನ್ನು ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರಿಗೆ ಹಸ್ತಾಂತರಿಸಿ ಗಮನ ಸೆಳೆದರು.
ಸದ್ಯ ಬಿಬಿಎಂಪಿ ಆಯುಕ್ತರಾಗಿದ್ದ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು. ಜತೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನೂ ಗುಪ್ತಾ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಮುಖ್ಯ ಆಯುಕ್ತ: ನಗರಾಭಿವೃದ್ಧಿ ಇಲಾಖೆ ೨೦೨೦ರ ಬಿಬಿಎಂಪಿ ಕಾಯ್ದೆಯನುಸಾರ ಹುದ್ದೆಗಳ ಹೆಸರು ಬದಲಾಯಿಸಿರುವ ಹಿನ್ನೆಲೆ ಇಂದಿನಿಂದ ಬಿಬಿಎಂಪಿಯ ಆಯುಕ್ತರು ಇನ್ನು ಮುಖ್ಯ ಆಯುಕ್ತ. ವಲಯಗಳ ಉಸ್ತುವಾರಿ ಹೊಣೆ ಹೊತ್ತಿದ್ದ ವಿಶೇಷ ಆಯುಕ್ತರು, ವಲಯ ಆಯುಕ್ತರಾಗಿದ್ದಾರೆ. ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಂಟಿ ಆಯುಕ್ತರು ಇನ್ನು ವಲಯ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಾಕ್ಸ್..

ಮತ್ತಷ್ಟು ಚುರಕು
ಅಧಿಕಾರ ಸ್ವೀಕರಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ನೂತನ ಮುಖ್ಯ ಆಯುಕ್ತ ಗೌರವ್ ಗುಪ್ತ, ಇಲ್ಲಿನ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಟ್ಟಾಗಿಸಿ, ಬಿಬಿಎಂಪಿಗೆ ಕಾರ್ಯ ವೈಖರಿಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ರಾಜಧಾನಿ ಬೆಂಗಳೂರಿಗೆ ಕೊರೋನಾ ಭೀತಿ ಎದುರಾಗಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದೇ ರೀತಿ, ಸಾರ್ವಜನಿಕರು ಸಹ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ, ಪಾಲನೆ ಮಾಡಬೇಕು. ನಿಯಮಾವಳಿ ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿರ್ಗಮಿತ ಆಯುಕ್ತರಾದ ಮಂಜುನಾಥ ಪ್ರಸಾದ್ ಅವರು ಉತ್ತಮ ಕೆಲಸಗಳನ್ನು ಬಿಬಿಎಂಪಿಯಲ್ಲಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಅವರ ಕಾರ್ಯಕ್ರಮಗಳು ಜನರಿಗೆ ತಲುಪಿದ್ದು, ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸುತ್ತೇನೆ ಎಂದು ಗೌರವ್ ಗುಪ್ತ ನುಡಿದರು.

ಬಾಕ್ಸ್..

ಸಲಹೆಗಳು ಬೇಕು
ಬಿಬಿಎಂಪಿಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರ ಸಲಹೆಗಳನ್ನು ಪಡೆಯಲಾಗುವುದು. ಬಿಬಿಎಂಪಿ ನೂತನ ಕಾಯ್ದೆ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗುವುದು.

  • ರಾಕೇಶ್ ಸಿಂಗ್, ಆಡಳಿತಾಧಿಕಾರಿ, ಬಿಬಿಎಂಪಿ