ಬಿಬಿಎಂಪಿ ಅಧಿಕಾರಿಗಳಿಗೆ ಗೌರವ್ ಗುಪ್ತ ತರಾಟೆ

ಬೆಂಗಳೂರು, ಅ.27-ನಗರದೆಲ್ಲೆಡೆ ವೈಟ್‌ ಟಾಪಿಂಗ್ ಯೋಜನೆ ಅಡಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳಿಗೆ ಚುರುಕು ಮುಟ್ಟಿಸದ ಅಧಿಕಾರಿಗಳನ್ನು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಮುಖ ರಸ್ತೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪಾಲಿಕೆ ವತಿಯಿಂದ ವಿವಿಧ ಹಂತದಲ್ಲಿ ವೈಟ್‌ಟಾಪಿಂಗ್ ಯೋಜನೆ ಅಡಿ 68 ರಸ್ತೆಗಳನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿಗಳನ್ನು ಕೈಗೊಂಡು ಸಾಕಷ್ಟು ಸಮಯವಾಗಿದ್ದರೂ ಸಹ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಹೆಬ್ಬಾಳದಿಂದ ಕೆ.ಆರ್.ಪುರವರೆಗಿನ ಹೊರವರ್ತುಲ ರಸ್ತೆಯಲ್ಲಿ ಮುಖ್ಯ ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸಿದ್ದು, ಮೇಲುಸೇತುವೆಗಳು ಇರುವ ಭಾಗದಲ್ಲಿ ಡಾಂಬರೀಕರಣವನ್ನು ಕೂಡಲೇ ಪ್ರಾರಂಭಿಸಬೇಕು. ಈ ಪೈಕಿ ಇದೇ ವಾರದಲ್ಲಿ ಆ ಭಾಗದಲ್ಲಿರುವ 3 ಮೇಲುಸೇತುವೆಗಳ ಡಾಂಬರೀಕರಣವನ್ನು ಪ್ರಾರಂಭಿಸಿ ಪೂರ್ಣಗೊಳಿಸಲು ಸೂಚಿಸಿದರು.

ಉಳಿದಂತೆ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಗಳಲ್ಲಿ ಸಹ ಡಾಂಬರೀಕರಣವನ್ನು ಕೂಡಲೇ ಪ್ರಾರಂಭಿಸಬೇಕು.ಇನ್ನೂ, ಕೆಲವೊಂದು ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಂತಹ ರಸ್ತೆಗಳಲ್ಲಿ ಯಾವುದೇ ಕಾರಣಗಳನ್ನು ನೀಡದೇ ಶೀಘ್ರ ಕಾಮಗಾರಿ ಆರಂಭಿಸುವಂತೆ ಹೇಳಿದರು.

ವೈಟ್‌ಟಾಪಿಂಗ್ ಕಾಮಗಾರಿ ಕೈಗೊಂಡಿರುವ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಬಿಸುವವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಸಮರ್ಪಕವಾಗಿ ಆಗಬೇಕು. ಈ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು. ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗಬಾರದು ಎಂದರು.

ಇನ್ನೂ, ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ವೇಳೆ ಸಂಚಾರಿ ಪೊಲೀಸ್ ಇಲಾಖೆಯಿಂದ ಸಂಚಾರಿ ಮಾರ್ಗ ಬದಲಾವಣೆಗೆ ಅನುಮತಿ ಪಡೆದು ಕೆಲಸ ಮಾಡಬೇಕು. ಈ ಸಂಬಂಧ ಯಾವ್ಯಾವ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಅನುಮತಿ ಬೇಕು ಎಂಬ ಪಟ್ಟಿಯನ್ನು ಕೊಡಿ, ಸಂಚಾರಿ ಪೊಲೀಸ್ ಇಲಾಖೆ ಜೊತೆ ಮಾತನಾಡಿ ಅನುಮತಿ ಪಡೆಯುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತ ನುಡಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಎನ್.ರಮೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.