ಬಿಪಿನ್ ಚಂದ್ರಪಾಲ್ ಬಹುಮುಖ ಕೊಡುಗೆ ಅವಿಸ್ಮರಣೀಯ

ಕಲಬುರಗಿ.ನ.7: ಅಪ್ಪಟ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಲೇಖಕ, ಸ್ವದೇಶ ಚಳುವಳಿಯ ನಾಯಕ, ಪ್ರಖರ ವಾಗ್ಮಿಗಳಾಗಿದ್ದ ಬಿಪಿನ್ ಚಂದ್ರಪಾಲ್ ಅವರು ನಮ್ಮ ದೇಶಕ್ಕೆ ಬಹುಮುಖವಾದ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ಆಳಂದ ರಸ್ತೆಯ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಬಿಪಿನ್ ಚಂದ್ರಪಾಲ್ ಅವರ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಲಾಲ್-ಬಾಲ್-ಪಾಲ್ ಎಂಬ ತ್ರಿವಳಿ ಹೆಸರುಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರುಗಳು ಇಂದಿಗೂ ಕೂಡಾ ಜನಮಾನಸದಲ್ಲಿ ಉಳಿದಿವೆಯೆಂದರೆ ಅವರು ಮಾಡಿರುವ ಕಾರ್ಯಕ್ಕೆ ಸಾಕ್ಷಿಯಾಗಿದೆ. ಮಹರ್ಷಿ ಅರವಿಂದೋ ಅವರ ಜೊತೆಗೂಡಿ ಪಾಲ್ ಅವರು ಸ್ವದೇಶಿ ಚಳುವಳಿಯ ಮೂಲಕ ಭಾರತೀಯರ ಸ್ವಾಭಿಮಾನವನ್ನು ಎಚ್ಚರಿಸಿದ್ದಾರೆ. ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು, ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಬಸವರಾಜ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ಅಣ್ಣಾರಾವ ಮಂಗಾಣೆ, ಪ್ರಕಾಶ ಸರಸಂಬಿ, ಶಿವನಂದಯ್ಯ ಹಿರೇಮಠ ಗೊಬ್ಬೂರ, ಗಣಪತಿ ಪ್ರಚಂಡೆ ಸೇರಿದಂತೆ ಬಡಾವಣೆಯ ನಾಗರಿಕರು, ಮತ್ತಿತರರಿದ್ದರು.