ಬಿಪಿಎಲ್ ಕಾರ್ಡ್ ಆಯ್ಕೆಗೆ ಮಾನದಂಡ ಬದಲಿಸಲು ಮನವಿ

ದಾವಣಗೆರೆ.ಏ.೨೪; ಸರ್ಕಾರ ಬಡವರಿಗೆ ಅನುಕೂಲವಾಗಲಿ ಎಂದು ಮಾಡಿರುವ ಯೋಜನೆಯೇ ಬಿಪಿಎಲ್ ಕಾರ್ಡ್ ಯೋಜನೆ, ಆದರೆ  ಬಿಪಿಎಲ್ ಫಲಾನುಭವಿಗಳ ಆಯ್ಕೆಯಲ್ಲಿ ಇರುವ ಮಾನದಂಡ ಬಡವರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ಹೇಳಿದರು.ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರ ಅಥವಾ ಸರ್ಕಾರದಿಂದ ಅನುದಾನ ಪಡೆದಂತಹ ಸಂಸ್ಥೆಗಳ ನೌಕರರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತಿಲ್ಲ, ಈ ನೌಕರರಲ್ಲಿ ಕೆಲವರಿಗೆ ಮಾತ್ರ ಸರ್ಕಾರಿ ಯೋಜನೆಯ ಮುಖಾಂತರ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಸಾಧ್ಯವಿದ್ದು, ಇನ್ನುಳಿದ ನೌಕರರಿಗೆ ಆಸ್ಪತ್ರೆ ವೆಚ್ಚವನ್ನು ಭರಿಸುವ ವ್ಯವಸ್ಥೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಸಹ ಇಲ್ಲ ಎಂದರೆ ಅಂತಹ ನೌಕರರು ಮತ್ತು ಅವರ ಕುಟುಂಬದವರು ಲಕ್ಷಾಂತರ ರೂ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವೇ.
ಇನ್ನೂ ರೈತರ ವಿಷಯಕ್ಕೆ ಬಂದರೆ ಮೂರು ಹೆಕ್ಟೇರ್ ಒಣ ಭೂಮಿ ಹೊಂದಿರುವ ರೈತರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಸರ್ಕಾರ ಹೇಳುತ್ತದೆ, ಮಳೆ ಬಂದರೆ ಬೆಳೆ ಅನ್ನುವಂತಹ ಸ್ಥಿತಿಯಲ್ಲಿರುವ ರೈತರಿಗೆ ಈ ರೀತಿಯ ಕಾನೂನು ತಂದರೆ ಅವರು ಏನು ಮಾಡಬೇಕು, ರೈತ ತನ್ನ ಕುಟುಂಬಸ್ಥರಿಗೆ ಆರೋಗ್ಯ ಸರಿ ಇಲ್ಲ ಎಂದರೆ ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗದೆ ನೇಣಿಗೆ ತಲೆ ಒಡ್ಡದೆ ಬೇರೆ ದಾರಿ ಇದೆಯೇ.ನಗರ ಪ್ರದೇಶದಲ್ಲಿ 1000 ಚದುರ ಅಡಿ ಮನೆ ಹೊಂದಿರುವ ನಾಗರೀಕರಿಗೆ ಬಿಪಿಎಲ್ ಕಾರ್ಡ್ ವಿತರಣೆ ಇಲ್ಲ ಎಂಬ ಕಾನೂನು ಇದೆ, ನಗರ ಪ್ರದೇಶದಲ್ಲಿ ಮನೆ ಇದೆ ಎಂದ ಮಾತ್ರಕ್ಕೆ ಆರೋಗ್ಯ ಕೆಡಬಾರದು ಎಂಬ ಕಾನೂನು ಇದೆಯೇ ಅಥವಾ ಮನೆ ಇದ್ದ ಮಾತ್ರಕ್ಕೆ ಲಕ್ಷಾಂತರ ವೈದ್ಯಕೀಯ ವೆಚ್ಚ ಭರಿಸಲು ಹೇಗೆ ಸಾಧ್ಯ.ಪಡಿತರ ರಹಿತ ಬಿಪಿಎಲ್ ಕಾರ್ಡ್ ವಿತರಣೆ ಮಾಡಿ ಈ ಕುಟುಂಬಗಳಿಗೆ ವೈದ್ಯಕೀಯ ವೆಚ್ಚವನ್ನು ಬಿಪಿಎಲ್ ಕಾರ್ಡ್ ಮುಖಾಂತರ ಸರ್ಕಾರ ಬರಿಸಬೇಕು ಎಂದು ಸರ್ಕಾರಕ್ಕೆ  ಮನವಿ ಮಾಡಿದರು.